ಕೆಲ ದಿನಗಳ ಹಿಂದಷ್ಟೇ ನಟ ಸನ್ನಿ ಡಿಯೋಲ್ ಅವರ ವಿಡಿಯೋವೊಂದು ವೈರಲ್ ಆಗಿ ಸಖತ್ ಸದ್ದು ಮಾಡಿತ್ತು. ಮುಂಬೈನ ಬೀದಿಗಳಲ್ಲಿ ಅಮಲೇರಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದರು. ವಿಡಿಯೋ ಶರವೇಗದಲ್ಲಿ ವೈರಲ್ ಆಗಿ ನಾನಾ ತರನಾದ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದ್ದ ಬೆನ್ನಲ್ಲೇ ನಟ ಸೋಷಿಯಲ್ ಮೀಡಿಯಾದಲ್ಲಿ ಇದು ಚಿತ್ರೀಕರಣದ ವಿಡಿಯೋ ಎಂಬುದನ್ನು ಬಹಿರಂಗಪಡಿಸಿದ್ದರು. ಅದಾಗ್ಯೂ, ನಟ ಹಳೇ ಘಟನೆಯನ್ನು ಉದ್ದೇಶಿಸಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಇದು ತಮ್ಮ ಮುಂಬರುವ ಚಿತ್ರ 'ಸಫರ್'ನ ಚಿತ್ರೀಕರಣದ ಭಾಗವಾಗಿದೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಈ ಘಟನೆಯನ್ನು ಉದ್ದೇಶಿಸಿ ಮಾತನಾಡಿದ ಸನ್ನಿ ಡಿಯೋಲ್, "ಇದು ಚಿತ್ರೀಕರಣದ ವಿಡಿಯೋ, ಅಧಿಕೃತ ವಿಡಿಯೋ ಅಲ್ಲ, ಹಾಗಾಗಿ ಎಲ್ಲರೂ ಆರಾಮಾಗಿರಿ. ಹಾಗೇನಾದರು ನಾನು ಕುಡಿಯಲು ಬಯಸಿದರೆ, ನಾನು ಅದನ್ನು ರಸ್ತೆಯಲ್ಲೋ ಅಥವಾ ಆಟೋ ರಿಕ್ಷಾದಲ್ಲೋ ಮಾಡುತ್ತೇನೆಯೇ?. ನಾನು ಕುಡಿಯುವುದಿಲ್ಲ ಎಂಬುದೇ ಸತ್ಯಾಂಶ. ಅದು ನಿಜವಾದ ವಿಡಿಯೋ ಅಲ್ಲ, ಬದಲಾಗಿ ಚಿತ್ರೀಕರಣದ ಒಂದು ಭಾಗ" ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಕುಡಿತು ತೂರಾಡುತ್ತಿರುವಂತೆ ಪ್ರದರ್ಶಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಸನ್ನಿ ಡಿಯೋಲ್ ತೆರೆಮರೆಯ ವಿಡಿಯೋ ಹಂಚಿಕೊಂಡಿದ್ದರು. ಚಿತ್ರೀಕರಣ ನಡೆಸುತ್ತಿರುವ ದೃಶ್ಯ ಅದಾಗಿತ್ತು. ಅಸಲಿ ವಿಡಿಯೋ ಹಂಚಿಕೊಂಡ ನಟ, "ಅಫ್ವಾಹೋನ್ ಕಾ 'ಸಫರ್' ಬಸ್ ಯಹಿ ತಕ್" ಎಂಬ ಶೀರ್ಷಿಕೆ ಕೂಡ ನೀಡಿದ್ದರು.