ಲವ್ ಮಾಕ್ಟೈಲ್ ಚಿತ್ರದ ಭರ್ಜರಿ ಸಕ್ಸಸ್ ಬಳಿಕ ಡಾರ್ಲಿಂಗ್ ಕೃಷ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದೀಗ ಟೈಟಲ್ ನಿಂದಲೇ ಸ್ಯಾಂಡಲ್ ವುಡ್ನಲ್ಲಿ ಕ್ರೇಜ್ ಹುಟ್ಟಿಸಿರೋ ಶುಗರ್ ಫ್ಯಾಕ್ಟರಿ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತೆ ಲವರ್ ಬಾಯ್ ಆಗಿ ಸಿನಿಮಾ ಪ್ರೇಮಿಗಳ ಮುಂದೆ ಬರ್ತಾ ಇದ್ದಾರೆ.
ಇತ್ತೀಚಿಗೆ ಈ ಚಿತ್ರದ ಟೈಟಲ್ ಟ್ರ್ಯಾಕ್ ಮಂತ್ರಿಮಾಲ್ನಲ್ಲಿ ಬಿಡುಗಡೆಯಾಯಿತು. ಅಲ್ಲಿ ನೆರದಿದ್ದ ಸಿನಿ ಪ್ರೇಕ್ಷಕರ ಕೈಯಲ್ಲೇ ಹಾಡು ಬಿಡುಗಡೆ ಮಾಡಿಸಿದ್ದು ವಿಶೇಷವಾಗಿತ್ತು. ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ಪಾರ್ಟಿಯಲ್ಲಿ ಹಾಡಿ, ಕುಣಿಯುವ ಈ ಸಂಗ್ಗೆ ಪಾರ್ಟಿ ಪ್ರಿಯರಿಗೆ ಸರ್ವಕಾಲಕ್ಕೂ ಮೆಚ್ಚುಗೆಯ ಗೀತೆಯಾಗಲಿದೆ. ತಮ್ಮ ವಿಶಿಷ್ಟ ಕಂಠದ ಮೂಲಕ ಜನಪ್ರಿಯರಾಗಿರುವ ಚಂದನ್ ಶೆಟ್ಟಿ, ಈ ಹಾಡನ್ನು ಬರೆದು ಹಾಡಿದ್ದಾರೆ. ರುಚಿರ ವೈದ್ಯ ಇಂಗ್ಲಿಷ್ ರ್ಯಾಪ್ಗೆ ಧ್ವನಿಯಾಗಿದ್ದಾರೆ. ಕಬೀರ್ ರಫಿ ಸಂಗೀತ ಇದೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ನಟಿ ಅಮೂಲ್ಯ ಅವರ ಪತಿ ಜಗದೀಶ್ ಹಾಗೂ ರಾಜಕೀಯ ಮುಖಂಡರಾದ ರಾಮಚಂದ್ರಪ್ಪ ಅವರು ಸಮಾರಂಭಕ್ಕೆ ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.
ಈ ಹಾಡಿನ ಬಗ್ಗೆ ಮಾತನಾಡಿದ ನಾಯಕ ಡಾರ್ಲಿಂಗ್ ಕೃಷ್ಣ, ಇದು ನನ್ನ ಸಿನಿ ಜರ್ನಿಯ ಬಿಗ್ ಬಜೆಟ್ ಚಿತ್ರ ಎನ್ನಬಹುದು. ನಿಜ ಜೀವನದಲ್ಲಿ ಪಾರ್ಟಿ ಮಾಡದ ನನ್ನ ಹತ್ತಿರ ಈ ಚಿತ್ರದಲ್ಲಿ ಭರ್ಜರಿ ಪಾರ್ಟಿ ಮಾಡಿಸಿ ಸಖತ್ತಾಗಿ ಕುಣಿಸಿದ್ದಾರೆ. ಚಂದನ್ ಶೆಟ್ಟಿ ಅವರ ಗಾಯನ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.