ಮುಂಬೈ:ಬಾಲಿವುಡ್ ಚಿತ್ರ ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿ ಮತ್ತು ಅನುರಾಗ್ ಕಶ್ಯಪ್ ನಡುವೆ ಟ್ವಿಟರ್ನಲ್ಲಿ ಮಾತಿನ ಚಕಮಕಿ ನಡೆದಿದೆ. ಇತ್ತೀಚೆಗೆ ಅನುರಾಗ್ ಕಶ್ಯಪ್, "ಕಾಂತಾರ ಮತ್ತು ಪುಷ್ಪನಂತಹ ಸಿನಿಮಾಗಳು ಉದ್ಯಮವನ್ನು ನಾಶ ಮಾಡುತ್ತಿವೆ" ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ 'ದಿ ಕಾಶ್ಮೀರಿ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದು, ಇಬ್ಬರ ನಡುವೆ ಟ್ವೀಟ್ ವಾರ್ಗೆ ಕಾರಣವಾಗಿದೆ.
'ಬಾಲಿವುಡ್ ಮಿಲಾರ್ಡ್ ಧೋರಣೆಗೆ ನಾನು ಸಂಪೂರ್ಣವಾಗಿ ವಿರೋಧಿಸುತ್ತೇನೆ. ಇದಕ್ಕೆ ನೀವು ಒಪ್ಪುತ್ತೀರಾ?' ಎಂದು ವಿವೇಕ್ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್, 'ಸರ್, ಇದು ನಿಮ್ಮ ತಪ್ಪಲ್ಲ. ನನ್ನ ಟ್ವೀಟ್ಗಳ ಸಂಭಾಷಣೆಗಳಂತೆಯೇ ನಿಮ್ಮ ಚಲನಚಿತ್ರಗಳನ್ನು ಸಂಶೋಧಿಸಲಾಗಿದೆ. ನೀವು ಮತ್ತು ನಿಮ್ಮ ಮಾಧ್ಯಮ ಒಂದೇ ರೀತಿಯ ಸ್ಥಿತಿಯಲ್ಲಿದೆ. ಪರವಾಗಿಲ್ಲ, ಮುಂದಿನ ಬಾರಿ ಸ್ವಲ್ಪ ಗಂಭೀರವಾಗಿ ಸಂಶೋಧನೆ ಮಾಡಿ' ಎಂದಿದ್ದಾರೆ.
ಇದಕ್ಕೆ ಟ್ವೀಟ್ ಮೂಲಕವೇ ತಿರುಗೇಟು ನೀಡಿರುವ ಅಗ್ನಿಹೋತ್ರಿ, 'ದಿ ಕಾಶ್ಮೀರ್ ಫೈಲ್ಸ್‌ನ 4 ವರ್ಷಗಳ ಸಂಶೋಧನೆಯು ಸುಳ್ಳು ಎಂದು ಸಾಬೀತುಪಡಿಸಿ. ಗಿರಿಜಾ ಟಿಕೂ, ಬಿ.ಕೆ. ಗಂಜು, ವಾಯುಪಡೆಯ ಸಿಬ್ಬಂದಿ ಹತ್ಯೆ, ನದಿಮಾರ್ಗ ಎಲ್ಲವೂ ಸುಳ್ಳು. 700 ಪಂಡಿತರ ವಿಡಿಯೋಗಳು ಸುಳ್ಳು. ಹಿಂದೂಗಳು ಎಂದಿಗೂ ಸಾಯಲಿಲ್ಲ ಎಂಬುದನ್ನು ನೀವು ಸಾಬೀತು ಪಡಿಸಿ. ಆಗ ಈ ರೀತಿ ತಪ್ಪು ಮತ್ತೊಮ್ಮೆ ಆಗುವುದಿಲ್ಲ' ಎಂದಿದ್ದಾರೆ.