ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ನಿರ್ದೇಶಕ ರಾಜ್ ಕುಮಾರ್ ಹಿರಾನಿ ಕಾಂಬೋದ 'ಡಂಕಿ' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಬಾಕ್ಸ್ ಆಫೀಸ್ ಅಂಕಿಅಂಶ ಉತ್ತಮವಾಗಿವೆ ನಿಜ. ಆದರೆ ಸಿನಿಮಾ ನಿರೀಕ್ಷೆ ತಲುಪುವಲ್ಲಿ ಕೊಂಚ ಹಿನ್ನಡೆ ಕಂಡಿದೆ.
ಈ ಹಿಂದೆ ರಾಜ್ ಕುಮಾರ್ ಹಿರಾನಿ ಮತ್ತು ಅಮೀರ್ ಖಾನ್ ಕಾಂಬಿನೇಶನ್ನಲ್ಲಿ ಮೂಡಿ ಬಂದಿದ್ದ 'ಪಿಕೆ' ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಸಾಧಿಸಿತ್ತು. ಅಂದು 'ಪಿಕೆ' ಪದ ಮನೆಮಾತಾಗಿತ್ತು. 'ಡಂಕಿ' ವಿಚಾರದಲ್ಲೂ ಇತಿಹಾಸ ಮರುಕಳಿಸಲಿದೆ ಎಂದು ಬಹುತೇಕರು ಭಾವಿಸಿದ್ದರು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ಇತ್ತೀಚೆಗೆ ಚಿತ್ರದ ನಾಯಕ ನಟ ಶಾರುಖ್ ಖಾನ್ ಈ ಕುರಿತು ಮಾತನಾಡಿದ್ದಾರೆ.
''ನಾನು 'ಡಂಕಿ' ಆರಂಭಿಸಿದಾಗ ಹೆಚ್ಚು ಗೊತ್ತಿರಲಿಲ್ಲ. ಪರಿಕಲ್ಪನೆ ಹೊಸದಾಗಿತ್ತು. ನಿರ್ದೇಶಕ ರಾಜ್ ಸರ್ ಮತ್ತು ನಾನು ಒಟ್ಟಿಗೆ ಕೆಲಸ ಮಾಡಲು ಬಯಸಿದ್ದೆವು. ಕಥೆಯನ್ನು ಸರಿಯಾಗಿ ವಿವರಿಸಲು ಸಾಧ್ಯವಾಗದಿದ್ದರೆ, ಅವರು ಮುಂದೆ ಬರುವುದಿಲ್ಲ. ಕೊನೆಗೆ ಸಿನಿಮಾ ಆರಂಭವಾಯಿತು. ನಿರ್ದೇಶಕರು ಡಂಕಿ ಎಂದು ಶೀರ್ಷಿಕೆ ಇಡಬೇಕೆಂದರು. ಆದರೆ ಜನರಿಗೆ ಡಂಕಿ ಶೀರ್ಷಿಕೆಯ ಅರ್ಥವೇನೆಂದು ತಿಳಿದಿಲ್ಲ. ನಾವೂ ಕೂಡ ಅದರ ಬಗ್ಗೆ ಹೆಚ್ಚು ಗಮನಹರಿಸಲಿಲ್ಲ. ಏಕೆಂದರೆ 'ಪಿಕೆ' ಸಿನಿಮಾ ಸಮಯದಲ್ಲೂ ಶೀರ್ಷಿಕೆಯ ಅರ್ಥ ಯಾರಿಗೂ ಗೊತ್ತಿರಲಿಲ್ಲ. ಸಿನಿಮಾ ರಿಲೀಸ್ ಆದ ಬಳಿಕವೇ ಎಲ್ಲರಿಗೂ ಆ ಬಗ್ಗೆ ಗೊತ್ತಾಯಿತು'' ಎಂದರು.
"ಡಂಕಿ' ಅಂದ್ರೆ ಅಕ್ರಮ ಪ್ರಯಾಣ ಎಂದರ್ಥ. ದೇಶದ ಗಡಿಯುದ್ದಕ್ಕೂ ನಡೆಯುವ ಅಕ್ರಮ ಪ್ರಯಾಣವನ್ನು ಕತ್ತೆ ಪ್ರಯಾಣ ಎಂದು ಕೂಡಾ ಕರೆಯಲಾಗುತ್ತದೆ. ಪಂಜಾಬಿ ಗಾದೆಯಿಂದ ಈ ಹೆಸರು ಬಂದಿದೆ" ಎಂದು ಶಾರುಖ್ ತಿಳಿಸಿದ್ದಾರೆ.