ತೆಲುಗು ಸಿನಿ ರಂಗದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಸ್ಪೈ'. 2022ರಲ್ಲಿ ತೆರೆಕಂಡ 'ಕಾರ್ತಿಕೇಯ 2' ಬಳಿಕ ಟಾಲಿವುಡ್ ನಟ ನಿಖಿಲ್ ಸಿದ್ದಾರ್ಥ್ ನಟಿಸುತ್ತಿರುವ ಆ್ಯಕ್ಷನ್ ಪ್ಯಾಕ್ಡ್ ಕಥಾಹಂದರವುಳ್ಳ ಚಿತ್ರವಿದು. ಈ 'ಸ್ಪೈ' ಚಿತ್ರದ ಟೀಸರ್ ದೆಹಲಿಯ ರಾಜ್ ಪಥ್ನಲ್ಲಿರುವ ಸುಭಾಷ್ ಚಂದ್ರಬೋಸ್ ಪುತ್ಥಳಿ ಎದುರು ಅನಾವರಣ ಮಾಡಲಾಗಿದೆ. ಟೀಸರ್ ವೀಕ್ಷಿಸಿದ ಪ್ರೇಕ್ಷಕರು ಸಿನಿಮಾ ಕುರಿತು ತಮ್ಮ ಕುತೂಹಲ ವ್ಯಕ್ತಪಡಿಸಿದ್ದಾರೆ.
ಭಾರತದ ಟಾಪ್ ಸೀಕ್ರೆಟ್, ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಸಾವನ್ನಪ್ಪಿದ್ದಾರೆ ಎನ್ನಲಾದ ವಿಚಾರಗಳನ್ನು ಬೆನ್ನತ್ತುವ ಗೂಢಾಚಾರಿ ಪಾತ್ರದಲ್ಲಿ ನಟ ನಿಖಿಲ್ ಸಿದ್ದಾರ್ಥ್ ಅಭಿನಯಿಸಿದ್ದಾರೆ. ನಟಿ ಐಶ್ವರ್ಯ ಮೆನನ್ ನಾಯಕಿಯಾಗಿ, ಸನ್ಯಾ ಠಾಕೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಖ್ಯಾತ ನಿರ್ದೇಶಕ ಹಾಗೂ ಸಂಕಲನಕಾರರು ಆಗಿರುವ ಗ್ಯಾರಿ ಬಿ ಹೆಚ್ 'ಸ್ಪೈ' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಹಲವು ಹಿಟ್ ಸಿನಿಮಾಗಳ ನಿರ್ಮಾಪಕ ಕೆ. ರಾಜಶೇಖರ್ ರೆಡ್ಡಿ ಅವರು ಇಡೀ ಎಂಟರ್‌ಟೈನ್‌ಮೆಂಟ್‌ನಡಿ ಚರಣ್ ರಾಜ್ ಉಪ್ಪಲಪತಿ ಜೊತೆಗೂಡಿ ಅದ್ಧೂರಿಯಾಗಿ ಈ ಸ್ಪೈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಟಾಲಿವುಡ್ ನಟ ನಿಖಿಲ್ ಸಿದ್ದಾರ್ಥ್ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಪೈ ಸಿನಿಮಾದ ಪೋಸ್ಟರ್, ಟೀಸರ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಈ ಬಹುನಿರೀಕ್ಷಿತ ಸಿನಿಮಾ ಕನ್ನಡ, ತೆಲುಗು ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಮೂಡಿ ಬರುತ್ತಿದೆ. ಚಿತ್ರಕ್ಕೆ ರಾಜಶೇಖರ್ ರೆಡ್ಡಿ ಅವರೇ ಕಥೆ ಕೂಡ ಬರೆದಿದ್ದಾರೆ. ಗ್ಯಾರಿ ಬಿ. ಹೆಚ್ ನಿರ್ದೇಶನದ ಜೊತೆಗೆ ಸಂಕಲನದ ಹೊಣೆ ಹೊತ್ತಿದ್ದಾರೆ. ಆ್ಯಕ್ಷನ್ ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಸಿನಿಮಾದಲ್ಲಿ ನಿಖಿಲ್ ಅಲ್ಲದೇ ಅಭಿನವ್ ಗೋಮತಮ್, ಮಕರಂದ್ ದೇಶಪಾಂಡೆ, ನಿತಿನ್ ಮೆಹ್ತಾ, ರವಿವರ್ಮ, ಕೃಷ್ಣ ತೇಜ, ಪ್ರಿಶಾ ಸಿಂಗ್, ಸೋನಿಯಾ ನರೇಶ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.