ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ, ಗಾಯಕನಾಗಿ, ರ‍್ಯಾಪರ್ ಆಗಿ ಗುರುತಿಸಿಕೊಂಡಿರುವ ಚಂದನ್ ಶೆಟ್ಟಿ ಸದ್ಯ ಸಿನಿಮಾಗಳ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿರೋದು ನಿಮಗೆಲ್ಲರಿಗೂ ತಿಳಿದಿರುವ ಸಂಗತಿ. ರ‍್ಯಾಪ್ ಹಾಡುಗಳ ಮೂಲಕ ಜನಪ್ರಿಯತೆ ಸಂಪಾದಿಸಿರುವ, ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ಚಂದನ್ ಶೆಟ್ಟಿ ನಾಯಕ ನಟನಾಗಿ ಹೊರ ಹೊಮ್ಮಲು ಸಜ್ಜಾಗಿದ್ದಾರೆ.
'ಸೂತ್ರಧಾರಿ' ಡಬ್ಬಿಂಗ್:ಸದ್ಯ ಸೂತ್ರಧಾರಿ ಸಿನಿಮಾದ ಜಪ ಮಾಡುತ್ತಿರುವ ಚಂದನ್ ಶೆಟ್ಟಿ ಅವರು ಸೈಲೆಂಟ್ ಆಗಿ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಇದರ ಬೆನ್ನಲ್ಲೇ ಸೂತ್ರಧಾರಿ ಚಿತ್ರತಂಡದಿಂದ ಲೂಪ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಚಂದನ್ ಶೆಟ್ಟಿ ಈ ಚಿತ್ರದ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಡ್ಯಾಶ್ ಸಾಂಗ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಚಂದನ್ ಶೆಟ್ಟಿ ಜೋಡಿಯಾಗಿ ಅಪೂರ್ವ ನಟಿಸಿದ್ದಾರೆ. ಜೊತೆಗೆ ಸಂಜನಾ ಆನಂದ್ ಸ್ಪೆಷಲ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ತಬಲನಾಣಿ ಸೇರಿದಂತೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಿರಣ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನವಿದೆ.
ದಕ್ಷಿಣ ಭಾರತದಲ್ಲಿ ಮೈ ಮೂವೀ ಬಜಾರ್ ಮೂಲಕ ಸಾಕಷ್ಟು ಇವೆಂಟ್ಗಳನ್ನು ನಡೆಸುತ್ತಿರುವ ನವರಸನ್ ಅವರು ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. "ಸೂತ್ರಧಾರಿ" ಇವರ ನಿರ್ಮಾಣದ ಐದನೇ ಚಿತ್ರ. ಸದ್ಯ ಡಬ್ಬಿಂಗ್ ಹಂತದಲ್ಲಿರೋ ಸೂತ್ರಧಾರಿ ಸಿನಿಮಾ ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡಿ ನಂತರ ಸಿನಿಮಾ ರಿಲೀಸ್ ಮಾಡುವ ಪ್ಲಾನ್ನಲ್ಲಿದೆ.