ಮುಂಬೈ:ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಬಾಲಿವುಡ್ ತಾರೆಯರಾದ ಅಮಿತಾಭ್ ಬಚ್ಚನ್, ಕಂಗನಾ ರಣಾವತ್, ಆಲಿಯಾ ಭಟ್ ಸೇರಿದಂತೆ ಹಲವು ನಟ-ನಟಿಯರು ಸಾಕ್ಷಿಯಾಗಲಿದ್ದಾರೆ. ಅವರೊಂದಿಗೆ ಗಾಯಕ ಸೋನು ನಿಗಮ್ ಕೂಡ ಭಾಗಿಯಾಗಲಿದ್ದು, ಐತಿಹಾಸಿಕ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
''ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವ ಅವಕಾಶ ಸಿಕ್ಕಿರುವುದಕ್ಕೆ ತಮಗೆ ತುಂಬಾ ಖುಷಿಯಾಗಿದೆ'' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಆಮಂತ್ರಣ ಪತ್ರಿಕೆಯ ಕಿರುನೋಟವನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಖುಷಿಯನ್ನು ಹೊರಹಾಕಿದ್ದಾರೆ. ಆಮಂತ್ರಣ ಪತ್ರಿಕೆ ನೋಡಿದ ನೆಟಿಜನ್ಸ್ ಕೂಡ ಪುಳಕಿತರಾಗಿದ್ದಾರೆ. ಕಾಮೆಂಟ್ಸ್ ಮೂಲಕ ಸೋನು ನಿಗಮ್ ಅವರ ಮೇಲಿನ ಪ್ರೀತಿ ಮತ್ತು ಗೌರವ ವ್ಯಕ್ತಪಡಿಸುತ್ತಿದ್ದಾರೆ.
'ನೀವು ಬೇರೆಯವರಿಗಿಂತ ಹೆಚ್ಚು ಅರ್ಹರು', 'ನನ್ನ ದೇವರಿಗೆ ದೇವರ ಆಹ್ವಾನ', 'ನೀವು ಇದಕ್ಕೆ ಅರ್ಹರು', 'ನಿಮ್ಮನ್ನು ಆಯ್ಕೆ ಮಾಡಿಕ್ಕೆ ಅಭಿನಂದನೆಗಳು ಸೋನು ಸರ್ಜಿ' ಅಂತೆಲ್ಲ ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಜಾಲತಾಣ ಬಳಕೆದಾರ 'ಇದು ಗಾಯಕನ ಮೇಲೆ ಭಗವಾನ್ ರಾಮನ ಕೃಪೆಯ ಫಲ'.. 'ಜೈ ಶ್ರೀ ರಾಮ್' ಎಂದು ಕಾಮೆಂಟ್ ಮಾಡಿದ್ದಾರೆ.
ಸೋನು ನಿಗಮ್ ಜೊತೆಗೆ ಬಾಲಿವುಡ್‌ನ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಅಮಿತಾಭ್ ಬಚ್ಚನ್ ಆದಿಯಾಗಿ ತಾರೆಯರಾದ ಮಾಧುರಿ ದೀಕ್ಷಿತ್, ಕಂಗನಾ ರಣಾವತ್, ಆಲಿಯಾ ಭಟ್, ಅಕ್ಷಯ್ ಕುಮಾರ್, ರಣಬೀರ್ ಕಪೂರ್, ಅನುಪಮ್ ಖೇರ್, ಸಂಜಯ್ ಲೀಲಾ ಬನ್ಸಾಲಿ, ಸನ್ನಿ ಡಿಯೋಲ್, ಟೈಗರ್ ಶ್ರಾಫ್, ರಾಜ್‌ಕುಮಾರ್ ಹಿರಾನಿ, ಆಯುಷ್ಮಾನ್ ಖುರಾನಾ, ಅಜಯ್ ದೇವಗನ್, ಮಧುರ್ ಭಂಡಾರ್ಕರ್ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಅಷ್ಟೆ ಅಲ್ಲದೇ ದಕ್ಷಿಣದ ಸೂಪರ್ ಸ್ಟಾರ್ಗಳಾದ ರಜನಿಕಾಂತ್, ಪ್ರಭಾಸ್, ಚಿರಂಜೀವಿ, ಮೋಹನ್ ಲಾಲ್, ಧನುಷ್, ಯಶ್ ಮತ್ತು ರಿಷಬ್ ಶೆಟ್ಟಿ ಅವರಿಗೂ ಕೂಡ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇದರೊಂದಿಗೆ ಐತಿಹಾಸಿಕ ಟಿವಿ ಧಾರಾವಾಹಿ ರಾಮಾಯಣದಲ್ಲಿ ರಾಮ ಮತ್ತು ಸೀತೆಯ ಪಾತ್ರಗಳನ್ನು ನಿರ್ವಹಿಸಿದ ಅರುಣ್ ಗೋವಿಲ್ ಮತ್ತು ದೀಪಿಕಾ ಚಿಖಾಲಿಯಾ ಕೂಡ ಕಾಣಿಸಿಕೊಳ್ಳಲಿದ್ದಾರೆ.
ರಾಮಮಂದಿರ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು ಜನವರಿ 22ರಂದು ಉದ್ಘಾಟನೆಗೊಳ್ಳಲಿದೆ. ಈ ನಿಮಿತ್ತ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಶದ ಅನೇಕ ಗಣ್ಯರಿಗೆ ಈಗಾಗಲೇ ಆಹ್ವಾನ ಕಳುಹಿಸಿದೆ. ಚಿತ್ರರಂಗ ಅಷ್ಟೆ ಅಲ್ಲದೇ ವಿವಿಧ ಕ್ಷೇತ್ರಗಳ ಗಣ್ಯರಿಗೂ ಆಹ್ವಾನಿಸಲಾಗಿದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೂ ಆಹ್ವಾನ ನೀಡಲಾಗಿದೆ. ಉದ್ಯಮಿಗಳಾದ ಮುಖೇಶ್ ಅಂಬಾನಿ, ಗೌತಮ್ ಅದಾನಿ, ರತನ್ ಟಾಟಾ ಕೂಡ ಭಾಗಿಯಾಗಲಿದ್ದಾರೆ. ಉದ್ಘಾಟನೆ ಬಳಿಕ ಮಹಾಪೂಜೆ ಮತ್ತು ಮಹಾ ಆರತಿ ನಡೆಯಲಿದೆ. ಉದ್ಘಾಟನೆಯ ಎರಡು ದಿನಗಳ ನಂತರ ದೇವಾಲಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ.
ಇದನ್ನೂ ಓದಿ:ರಾಮಮಂದಿರ ಉದ್ಘಾಟನೆ: ರಿಷಬ್ ಶೆಟ್ಟಿ, ಯಶ್ ಸೇರಿ ಚಿತ್ರರಂಗದ ಖ್ಯಾತನಾಮರಿಗೆ ಆಹ್ವಾನ