ಕರ್ನಾಟಕ

karnataka

ETV Bharat / entertainment

ಸಂಗೀತ ಶಾರದೆ ಲತಾ ಮಂಗೇಶ್ಕರ್ ಜನ್ಮದಿನ...ಎಲ್ಲೆಲ್ಲೂ ಗಾನ ಕೋಗಿಲೆಯ ಸ್ವರ ಸ್ಮರಣೆ - ಲತಾ ಮಂಗೇಶ್ಕರ್ ಹಾಡುಗಳು

ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ 93ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿಭಿನ್ನವಾಗಿ ಆಚರಿಸುತ್ತಿದ್ದಾರೆ.

Singer Lata Mangeshkar birth anniversary
ಸಂಗೀತ ಶಾರದೆ ಲತಾ ಮಂಗೇಶ್ಕರ್ ಜನ್ಮದಿನ

By

Published : Sep 28, 2022, 1:36 PM IST

Updated : Sep 28, 2022, 1:53 PM IST

ಇಂದು ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಜನ್ಮದಿನ. ಸಂಗೀತ ಶಾರದೆ ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಸುಮಧುರ ಗೀತೆಗಳ ಮೂಲಕ ಎಂದೆಂದಿಗೂ ಅಭಿಮಾನಿಗಳ ಮನದೊಳಗೆ ಜೀವಂತ ಈ ಗಾನ ಕೋಗಿಲೆ..

ಇಂದು ಅವರ 93ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿಭಿನ್ನವಾಗಿ ಆಚರಿಸುತ್ತಿದ್ದಾರೆ. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ. ಹಾಗಾಗಿ ವಿವಿಧ ರೀತಿಯಲ್ಲಿ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ. ಬಾಲಿವುಡ್​ ಸೆಲೆಬ್ರಿಟಿಗಳು, ಅಭಿಮಾನಿಗಳು ಸೋಶಿಯಲ್​ ಮೀಡಿಯಾ ಮೂಲಕ ಶುಭ ಕೋರುತ್ತಿದ್ದಾರೆ. ಯಶ್​ ರಾಜ್​ ಫಿಲ್ಮ್ಸ್​, ಶಾರುಖ್​ ಖಾನ್​ ಒಡೆತನದ ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್, ಕರಣ್​ ಜೋಹರ್​ ಅವರ ಧರ್ಮ ಪ್ರೊಡಕ್ಷನ್ಸ್ ಸೇರಿದಂತೆ ಅನೇಕ ನಿರ್ಮಾಣ ಸಂಸ್ಥೆಗಳು ಸಹ ಲತಾ ಮಂಗೇಶ್ಕರ್​ ಅವರ ಹುಟ್ಟುಹಬ್ಬಕ್ಕೆ ವಿಶ್​ ಮಾಡಿವೆ.

ಹಿನ್ನೆಲೆ: ಭಾರತ ರತ್ನ ಲತಾ ಮಂಗೇಶ್ಕರ್​ ಜನಿಸಿದ್ದು 1929ರ ಸೆಪ್ಟೆಂಬರ್​ 28. ಮರಾಠಿ ಸಂಗೀತಗಾರ ಪಂಡಿತ್ ದೀನನಾಥ್ ಮಂಗೇಶ್ಕರ್ ಮತ್ತು ಅವರ ಗುಜರಾತಿ ಪತ್ನಿ ಶೆವಂತಿ ಅವರ ಹಿರಿಯ ಮಗಳು. 7 ದಶಕಗಳ ಕಾಲ ಅವರು ಚಿತ್ರರಂಗದಲ್ಲಿ ಗಾನ ಕೋಗಿಲೆಯಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ 2022ರ ಫೆಬ್ರವರಿ 6ರಂದು ಅವರು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದು ಮಾತ್ರ ಗಾಯಕರ ಕಣ್ಣೀರಿಗೆ ಕಾರಣವಾಯಿತು. ಲಕ್ಷ್ಮಿಕಾಂತ್-ಪ್ಯಾರೆಲಾಲ್, ಮದನ್ ಮೋಹನ್, ಎಸ್​.ಡಿ ಬರ್ಮನ್, ಆರ್​. ಡಿ ಬರ್ಮನ್ ಮತ್ತು ಎ. ಆರ್. ರಹಮಾನ್ ಸೇರಿದಂತೆ ಅನೇಕ ಪ್ರಸಿದ್ಧ ಸಂಗೀತ ನಿರ್ದೇಶಕರೊಂದಿಗೆ ಇವರು ಕೆಲಸ ಮಾಡಿದ ಅನುಭವ ಕೂಡ ಹೊಂದಿದ್ದರು.

ನಟನೆಗೂ ಸೈ...ಸಂಗೀತ ಲೋಕದಲ್ಲಿ ಅವರ ಸಾಧನೆಗೆ ಬೇರೆ ಯಾರೂ ಸಾಟಿ ಇಲ್ಲ. ಕೇವಲ ಗಾಯಕಿಯಾಗಿ ಮಾತ್ರವಲ್ಲದೇ, ನಟಿಯಾಗಿ ಕೂಡ ಅಭಿನಯಿಸಿದ್ದಾರೆ. 13ನೇ ವಯಸ್ಸಿನಿಂದ ಚಲನಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು. 1942ರಿಂದ 1948ರವರೆಗೆ ಎಂಟು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ನಂತರದ ದಿನಗಳಲ್ಲಿ ನಟನೆ ತ್ಯಜಿಸಿದರು. ಆದ್ರೆ, ಅವರ ಸಂಗೀತ ಸಾಧನೆ ವರ್ಣಿಸಲು ಪದಗಳೇ ಇಲ್ಲ.

ಗಾನ ಕೋಗಿಲೆ ಲತಾ ಮಂಗೇಶ್ಕರ್ ಜನ್ಮದಿನ

ಲತಾರನ್ನು ಸ್ಮರಿಸಿದ ಪ್ರಧಾನಿ ಮೋದಿ..ಪ್ರಧಾನಿ ನರೇಂದ್ರ ಮೋದಿ ಕೂಡ ಲತಾ ಅವರ ಕುರಿತು ವಿಶೇಷ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅವರ ಜನ್ಮ ವಾರ್ಷಿಕೋತ್ಸವದಂದು ಅವರನ್ನು ಸ್ಮರಿಸುತ್ತಿದ್ದೇವೆ. ನಾನು ನೆನಪಿಸಿಕೊಳ್ಳುವುದು ತುಂಬಾ ಇದೆ. ಅವರು ತುಂಬಾ ಪ್ರೀತಿಯನ್ನು ಕೊಟ್ಟಿದ್ದಾರೆ. ಇಂದು ಅಯೋಧ್ಯೆಯ ಚೌಕ್‌ಗೆ ಅವರ ಹೆಸರಿಡಲು ನನಗೆ ಸಂತೋಷವಾಗಿದೆ. ಇದು ಶ್ರೇಷ್ಠ ಭಾರತೀಯ ಐಕಾನ್‌ಗಳಲ್ಲಿ ಒಬ್ಬರಿಗೆ ಸೂಕ್ತವಾದ ಗೌರವವಾಗಿದೆ ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಅಯೋಧ್ಯೆಯಲ್ಲಿ ಲತಾ ಮಂಗೇಶ್ಕರ್​ ವೃತ್ತ: ಸೆ.28 ರಂದು ಉದ್ಘಾಟನೆ

ಅಯೋಧ್ಯೆಯಲ್ಲಿ ಒಂದು ಚೌಕಕ್ಕೆ ಲತಾ ಮಂಗೇಶ್ಕರ್​ ಅವರ ಹೆಸರು ಇಡಲಾಗಿದೆ. ಅಲ್ಲಿ ಬೃಹತ್​ ವೀಣೆಯನ್ನು ನಿರ್ಮಿಸಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್​ ಆಗಿ 40 ಅಡಿ ಉದ್ದ, 12 ಮೀಟರ್​ ಎತ್ತರದ ಈ ವೀಣೆಯನ್ನು ಅನಾವರಣ ಮಾಡಿದ್ದಾರೆ.

25,000ಕ್ಕೂ ಹೆಚ್ಚು ಹಾಡು: ಸುಮಾರು 36 ಭಾರತೀಯ ಭಾಷೆಗಳಲ್ಲಿ 25,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರು ದಾಖಲಾಗುವಂತೆ ಮಾಡಿದ್ದಾರೆ. ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಲತಾ ಮಂಗೇಶ್ಕರ್ ಸಾಧನೆ ಅಪಾರ. ಇವರ ಹಾಡುಗಳೆಲ್ಲವೂ ಇವರಿಗೆ ಅಚ್ಚುಮೆಚ್ಚು. ಆದ್ರೆ ಇವರು ಹಾಡಿದ ಹಾಡುಗಳಲ್ಲಿ 5 ಹಾಡುಗಳು ಸಾರ್ವಕಾಲಿಕ ಮೆಚ್ಚಿನವುಗಳಾಗಿವೆ. ಅವುಗಳೆಂದರೆ, ಖ್ವಾಬ್ ಬನ್​​ಕರ್ ಕೋಯಿ ಆಯೇಗಾ (ರಜಿಯಾ ಸುಲ್ತಾನ್), ಚುನ್ರಿ ಸಂಭಾಲ್ ಗೋರಿ (ಬಾಹರೋನ್ ಕೆ ಸಪ್ನೆ), ಬರ್ಸೆ ಘನ್ ಸಾರಿ ರಾತ್ (ತರಂಗ್), ತು ಆಜ್ ಅಪ್ನಿ ಹಾತ್ ಸೆ ಕುಚ್ ಬಿಗ್ಡಿ ಸವಾರ್​ ದೇ (ಡಾಕು), ರಾಜಾ ಬೇಟಾ ಸೋಯಾ ಮೇರಾ (ರಾಜಾ ಹರಿಶ್ಚಂದ್ರ).

ಸಂಗೀತ ಶಾರದೆ ಲತಾ ಮಂಗೇಶ್ಕರ್ ಜನ್ಮದಿನ

ಪ್ರಶಸ್ತಿಗಳು: ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಭಾರತ ರತ್ನ, ಜೀವಮಾನದ ಸಾಧನೆ ಪ್ರಶಸ್ತಿ, ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿ, ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ, ಫಿಲ್ಮ್‌ಫೇರ್ ವಿಶೇಷ ಪ್ರಶಸ್ತಿ, ಹಿನ್ನೆಲೆ ಗಾಯನಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಮಹಾರಾಷ್ಟ್ರ ರಾಜ್ಯ ಸರ್ಕಾರದ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ, ಬೆಂಗಾಲ್ ಫಿಲ್ಮ್ ಜರ್ನಲಿಸ್ಟ್ ಅಸೋಸಿಯೇಶನ್‌ನಿಂದ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿ, ಡಾಟರ್ ಆಫ್ ದಿ ನೇಷನ್ ಅವಾರ್ಡ್, ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಸೂಪರ್​ಸ್ಟಾರ್ ಮಹೇಶ್​ ಬಾಬುಗೆ ಮಾತೃ ವಿಯೋಗ.. ಸಹೋದರನ ಬಳಿಕ ತಾಯಿ ಕಳೆದುಕೊಂಡ ಪ್ರಿನ್ಸ್​

ಗಾನ ಕೋಗಿಲೆ ಇಂದು ನಮ್ಮೊಂದಿಗಿಲ್ಲ. ಆದ್ರೆ ಭಾರತ ಸಿನಿಮಾ ರಂಗದ ಚರಿತ್ರೆಯ ಅತ್ಯಂತ ಪ್ರಮುಖ ಭಾಗವಾಗಿ ಲತಾ ಮಂಗೇಶ್ಕರ್ ಅವರ ಹೆಸರು ಎಂದಿಗೂ ಚಿರಸ್ಥಾಯಿ.

Last Updated : Sep 28, 2022, 1:53 PM IST

ABOUT THE AUTHOR

...view details