ತಿರುವನಂತಪುರಂ:ಜನವರಿ 22ರಂದು ನಡೆಯಲಿರುವ ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಸಂದರ್ಭದಲ್ಲಿ ರಾಮ ನಾಮ ಜಪಿಸುವಂತೆ ಖ್ಯಾತ ಹಿನ್ನೆಲೆ ಗಾಯಕಿ ಕೆ.ಎಸ್.ಚಿತ್ರಾ ವಿಡಿಯೋ ಬಿಡುಗಡೆ ಮಾಡಿದ್ದರು. ಕೇರಳದ ಆಡಳಿತಾರೂಢ ಸಿಪಿಎಂ ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಗಾಯಕಿಯ ಬೆಂಬಲಕ್ಕೆ ನಿಂತಿದ್ದರೆ, ಮತ್ತೊಂದೆಡೆ ಚಿತ್ರಾ ಮೇಲೆ ಕಿಡಿಗೇಡಿಗಳು ಸೈಬರ್ ದಾಳಿ ನಡೆಸುತ್ತಿದ್ದಾರೆ.
''ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯುವಾಗ ಮಧ್ಯಾಹ್ನ 12.20ಕ್ಕೆ 'ಶ್ರೀರಾಮ, ಜಯ ರಾಮ, ಜಯ ಜಯ ರಾಮ' ಮಂತ್ರ ಪಠಿಸುವಂತೆ ಗಾಯಕಿ ಕೇಳಿಕೊಂಡಿದ್ದರು. ಈ ಸಂದರ್ಭವನ್ನು ಗುರುತಿಸಲು ಅದೇ ದಿನ ಸಂಜೆ ತಮ್ಮ ಮನೆಗಳಲ್ಲಿ ಐದು ದೀಪಗಳನ್ನು ಹಚ್ಚಿಡುವಂತೆ ಹೇಳುತ್ತಾ, "ಲೋಕಾ ಸಮಸ್ತಾ ಸುಖಿನೋ ಭವಂತು" ಎಂಬ ಸಂಸ್ಕೃತ ಶ್ಲೋಕವನ್ನು ಪಠಿಸುವ ಮೂಲಕ ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದ್ದರು. ಸರ್ವೇಶ್ವರನು ಎಲ್ಲರಿಗೂ ಅನುಗ್ರಹವನ್ನು ದಯಪಾಲಿಸಲಿ ಎಂದು ಹಾರೈಸಿದ್ದರು. ಈ ವಿಡಿಯೋ ಸಂದೇಶವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇದಕ್ಕೆ ಕೆಲವು ಕಿಡಿಗೇಡಿಗಳು ಆಕ್ರೋಶ ವ್ಯಕ್ತಪಡಿಸಿ, ಗಾಯಕಿಯ ಮೇಲೆ ರಾಜಕೀಯ ಆರೋಪಗಳನ್ನು ಮಾಡುತ್ತಿದ್ದಾರೆ. ಮತ್ತೆ ಕೆಲವರು, ತನ್ನ ಭಾವನೆಗಳನ್ನು ವ್ಯಕ್ತಪಡಿಸುವ ಹಕ್ಕು ಚಿತ್ರಾ ಅವರಿಗಿದೆ ಎಂದು ಬೆಂಬಲಿಸಿದ್ದಾರೆ. ಚಿತ್ರಾ ಸಂಪೂರ್ಣವಾಗಿ ರಾಮಮಂದಿರದ ಪರವಾಗಿ ನಿಲುವು ತೆಗೆದುಕೊಳ್ಳಬಾರದಿತ್ತು ಎನ್ನುವುದು ಒಂದೆಡೆಯಾದರೆ, ಇಂತಹ ಸಂದೇಶ ನೀಡುವ ಮೂಲಕ ರಾಜಕೀಯ ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ ಎನ್ನುವುದು ಕೆಲವರ ದೂರು.