ಸ್ಯಾಂಡಲ್ವುಡ್ನಲ್ಲಿ ಸೂಪರ್ ಹಿಟ್ ಸಿನಿಮಾಗಳ ಟೈಟಲ್ ಮರುಬಳಕೆ ಆಗೋದು ಹೊಸದೇನಲ್ಲ. ಈಗ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಶುಭಮಂಗಳ' ಚಿತ್ರದ ಶೀರ್ಷಿಕೆ ಇಟ್ಟುಕೊಂಡು ಬಂದಿರುವ ಹೊಸ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ರೇಣುಕಾಂಬ ಸ್ಟುಡಿಯೋದಲ್ಲಿ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆದಿದ್ದು, ಚಿತ್ರತಂಡವು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ನಿರ್ದೇಶಕ ಸಂತೋಷ್ ಗೋಪಾಲ್ ಮಾತನಾಡಿ, ಮದುವೆ ಮನೆಯಲ್ಲಿ ನಡೆಯುವ ಕಥೆ ಇದು. ಮದುವೆ ವೇಳೆ ಎಮೋಷನ್, ಡ್ರಾಮಾ ಸೇರಿ ತುಂಬಾ ಕಥೆಗಳು ನಡೆಯುತ್ತಲೇ ಇರುತ್ತದೆ. ಆ ಕಥೆಗಳಲ್ಲಿ ಐದನ್ನು ಆಯ್ಕೆ ಮಾಡಿ ಸಿನಿಮಾ ಮಾಡಿದ್ದೇನೆ. ಈ ಚಿತ್ರದಲ್ಲಿ ಪುರುಷರು ಹಾಗೂ ಮಹಿಳೆಯರಿಬ್ಬರಿಗೂ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದರು.
ಸಾಕಷ್ಟು ಕಿರುಚಿತ್ರಗಳನ್ನು ನಿರ್ಮಿಸಿರುವ ಸಂತೋಷ್ ಗೋಪಾಲ್ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಮದುವೆ ಮನೆಯಲ್ಲಿ ನಡೆಯುವ ಕಾಮಿಡಿ, ಲವ್, ಸೆಂಟಿಮೆಂಟ್ ಎಳೆಯನ್ನು ಇಟ್ಟುಕೊಂಡು ಸಿನಿಮಾ ರೂಪಿಸಿದ್ದಾರೆ.