ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಅಂದಾಕ್ಷಣ ಸಹಜವಾಗಿ ನೆನಪಾಗುವುದು ಸದಾಶಿವನಗರದಲ್ಲಿರುವ ಡಾ.ರಾಜ್ಕುಮಾರ್ ಅವರ ಐಷಾರಾಮಿ ಮನೆ. ಅಣ್ಣಾವ್ರಂತೆ ಅವರ ಮೂರು ಮಕ್ಕಳಾದ ಶಿವ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ದಿವಂಗತ ಪುನೀತ್ ರಾಜ್ಕುಮಾರ್ ಸ್ಟಾರ್ ನಟರಾಗಿ ಮಿಂಚಿದ್ದಾರೆ.
ಇವರು ಮಾತ್ರವಲ್ಲದೇ ಅಣ್ಣಾವ್ರ ಮೊಮ್ಮಕ್ಕಳಾದ ವಿನಯ್ ರಾಜ್ಕುಮಾರ್, ಯುವ ರಾಜ್ಕುಮಾರ್, ಧೀರೇನ್ ರಾಮ್ ಕುಮಾರ್, ಧನ್ಯ ರಾಮ್ ಕುಮಾರ್ ಹಾಗು ಶಿವಣ್ಣನ ಮಗಳು ನಿವೇದಿತಾ ಶಿವ ರಾಜ್ಕುಮಾರ್ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಅಣ್ಣಾವ್ರ ಕುಟುಂಬದಿಂದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಅಷ್ಟಕ್ಕೂ ಯಾರು ಅಂತೀರಾ? ಆಕಸ್ಮಿಕ, ಜೀವನ ಚೈತ್ರ, ರಥಸಪ್ತಮಿ, ಭಕ್ತ ಪ್ರಹ್ಲಾದ, ಭಾಗ್ಯವಂತ, ವಸಂತ ಗೀತಾ, ಹೀಗೆ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಎಸ್.ಗೋವಿಂದರಾಜ್ ಹಾಗೂ ಅಣ್ಣಾವ್ರ ಮಗಳು ಲಕ್ಷ್ಮೀ ಅವರ ಮಗ ಷಣ್ಮುಖ ಗೋವಿಂದರಾಜ್ ಈಗ ಬೆಳ್ಳಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.
'ಚಿನ್ನದ ಮಲ್ಲಿಗೆ ಹೂವೇ':ಈ ಸಿನಿಮಾಗೆ 'ಚಿನ್ನದ ಮಲ್ಲಿಗೆ ಹೂವೇ' ಅಂತ ಟೈಟಲ್ ಇಡಲಾಗಿದೆ. ಈ ಹಿಂದೆ ನವಿಲು ಗರಿ ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ನವೀನ್ ಪಿ.ಎ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರ ವಜ್ರಗಳು ಕಾದಂಬರಿ ಆಧಾರಿತ ಸಾರಾ ವಜ್ರ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕಿ ಆರ್‍ನಾ ಸಾಧ್ಯ ಇದೀಗ ಈ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕಿಯಾಗಿ ಗುರುತಿಸಿಕೊಳ್ಳಲಿದ್ದಾರೆ.