ಪಠಾಣ್ ಸಿನಿಮಾ ಬಾಲಿವುಡ್ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ. ಕಿಂಗ್ ಖಾನ್ ಶಾರುಖ್ ಸಿನಿಮಾ ಅಂದ ಮೇಲೆ ನಿರಿಕ್ಷೇ ಹೆಚ್ಚೇ ಅಲ್ವೇ?. ಕೊನೆಯದಾಗಿ ಝೀರೋ (21 ಡಿಸೆಂಬರ್ 2018) ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ರೊಮ್ಯಾಂಟಿಕ್ ಹೀರೋ ಶಾರುಖ್ ಖಾನ್ ನಾಲ್ಕು ವರ್ಷಗಳ ಬಳಿಕ ಆ್ಯಕ್ಷನ್ ಅವತಾರದಲ್ಲಿ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಸಿನಿಮಾ ಬಿಡುಗಡೆಗೆ ಕೇವಲ ನಾಲ್ಕು ದಿನಗಳು ಬಾಕಿ ಇದ್ದು ಮೊದಲ ದಿನದ ಟಿಕೆಟ್ ಬಹುತೇಕ ಕಡೆಗಳಲ್ಲಿ ಸೋಲ್ಡ್ ಔಟ್ ಆಗಿದೆ.
ನಟ ಶಾರುಖ್ ಖಾನ್ ತಮ್ಮ ಅಮೋಘ ಅಭಿನಯದ ಮೂಲಕ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಅವರನ್ನು ಪ್ರೀತಿಸುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಮುಂಬೈನ ಶಾರುಖ್ ಅಭಿಮಾನಿಗಳ ಸಂಘವು ಇಡೀ ಥಿಯೇಟರ್ ಟಿಕೆಟ್ ಖರೀದಿ ಮಾಡುವ ಮೂಲಕ ಕಿಂಗ್ ಖಾನ್ ಮೇಲಿನ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ. ಹೌದು, ಈ ವಿಷಯ ಕೇಳಿದವರು ಹುಬ್ಬೇರಿಸಿದ್ದಾರೆ. ಸಿನಿಮಾ ತೆರೆ ಕಾಣಲು ಕೇವಲ ನಾಲ್ಕು ದಿನ ಬಾಕಿ ಇದೆ. ಈ ಹೊತ್ತಿನಲ್ಲಿ ಮುಂಬೈನ ಶಾರುಖ್ ಅಭಿಮಾನಿಗಳು ಗೈಟಿ ಗ್ಯಾಲಕ್ಸಿ ಥಿಯೇಟರ್ (Mumbai's Gaiety Galaxy Theater)ನ ಮೊದಲ 9 ಗಂಟೆಯ ಶೋನ ಎಲ್ಲ ಟಿಕೆಟ್ಗಳನ್ನು ಬುಕ್ ಮಾಡಿದ್ದಾರೆ.
ಖಾರುಖ್ ಖಾನ್ ಅಭಿಮಾನಿಗಳ ಸಂಘ: ಜಿ7 ಮಲ್ಟಿಫ್ಲೆಕ್ಸ್ ಮತ್ತು ಮರಾಠಾ ಮಂದಿರ್ ಸಿನಿಮಾ ಚಿತ್ರಮಂದಿರದದ ಕಾರ್ಯ ನಿರ್ವಾಹಕ ನಿರ್ದೇಶಕ ಮನೋಜ್ ದೇಸಾಯಿ ಮಾಹಿತಿ ನೀಡಿದ್ದು, ಖಾರುಖ್ ಖಾನ್ ಅಭಿಮಾನಿಗಳ ಸಂಘ ಒಂದು ಇಡೀ ಥಿಯೇಟರ್ ಟಿಕೆಟ್ಗಳನ್ನು ಕೊಂಡುಕೊಂಡಿದೆ. ಜನವರಿ 25ರಂದು ಬೆಳಗ್ಗೆ 9 ಗಂಟೆಗೆ ಈ ಅಭಿಮಾನಿಗಳು ಸಿನಿಮಾ ವೀಕ್ಷಣೆ ಮಾಡಲಿದ್ದಾರೆ ಎಂದು ತಿಳಿಸಿತು.
ಮುಂಬೈನ ಗೈಟಿ ಗ್ಯಾಲಕ್ಸಿ ಚಿತ್ರಮಂದಿರವನ್ನು 1972ರಲ್ಲಿ ಸ್ಥಾಪಿಸಲಾಯಿತು. ಮೊದಲ ಬಾರಿಗೆ ಇಲ್ಲಿ ಬೆಳಗ್ಗೆ 9 ಗಂಟೆಗೆ ಚಲನಚಿತ್ರ ಬಿಡುಗಡೆ ಆಗುತ್ತಿದೆ. ಶಾರುಖ್ ಅಭಿನಯದ ಪಠಾಣ್ ಚಿತ್ರ ಈ ಸಾಧನೆ ಮಾಡಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಥಿಯೇಟರ್ ಮೊದಲ ಬಾರಿಗೆ ತನ್ನ ನೀತಿಯನ್ನು ಬದಲಾಯಿಸಿಕೊಂಡಿದೆ.