ಮಾಜಿ ಶಾಸಕ ಇವಾನ್ ನಿಗ್ಲಿ ಕಥೆ ಬರೆದು ನಿರ್ಮಾಣ ಮಾಡಿರುವ ‘ಸೆಪ್ಟಂಬರ್ 13 ಸಿನಿಮಾ’ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಹೆಸರಾಂತ ನಿರ್ಮಾಪಕ ಡಾ ರಾಜಾ ಬಾಲಕೃಷ್ಣನ್ ಈ ಸಿನಿಮಾಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಸಂಕಲನ, ಛಾಯಾಗ್ರಹಣ ಜವಾಬ್ದಾರಿಯನ್ನೂ ನಿಭಾಯಿಸಿ ಸಿನಿಮಾದಲ್ಲಿ ಖಳನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ.
ಕೋವಿಡ್ ಸಮಯದಲ್ಲಿ ಇಡೀ ಜಗತ್ತೇ ನಲುಗಿ ಹೋಗಿತ್ತು. ಈ ಸಮಯದಲ್ಲಿ ಸಮರ್ಪಣಾ ಭಾವದಿಂದ ದುಡಿದವರು ವೈದ್ಯಕೀಯ ಕ್ಷೇತ್ರದವರು. ಅದರಲ್ಲಿಯೂ ನರ್ಸಿಂಗ್ ಸಮುದಾಯದ ಸೇವೆ ಅಪಾರ. ನರ್ಸಿಂಗ್ ಕುರಿತ ಕಥೆಯನ್ನೊಳಗೊಂಡ ಸೆಪ್ಟಂಬರ್ 13 ಸಿನಿಮಾದಲ್ಲಿ ಹಿರಿಯ ಕಲಾವಿದರಾದ ವಿನಯಾ ಪ್ರಸಾದ್, ಜೈ ಜಗದೀಶ್, ಯಮುನಾ ಶ್ರೀನಿಧಿ ನಟಿಸಿದ್ದಾರೆ. ಶ್ರೀಯಾರಿಧಿಬನ್ ನಾಯಕಿಯಾಗಿ ಈ ಸೆಪ್ಟಂಬರ್ 13 ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಉಳಿದಂತೆ ಕೆಲ ಯುವ ಪ್ರತಿಭೆಗಳು ಸಿನಿಮಾದಲ್ಲಿ ನಟಿಸಿದ್ದಾರೆ.
ಈ ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಇವಾನ್ ನಿಗ್ಲಿ, ಈ ಕಥೆ ಬರೆಯೋದಿಕ್ಕೆ ಕಾರಣ ಕೋವಿಡ್ ತಂದ ಸಂಕಷ್ಟ. ಮೊದಲು ನನಗೆ, ಬಳಿಕ ಮಗನಿಗೆ ಕೋವಿಡ್ ಸೋಂಕು ತಗುಲಿತ್ತು. ಆ ನಂತರ ನನ್ನ ಪತ್ನಿ, ಬಳಿಕ ನನ್ನ ಮಗನಿಗೆ ಕೊರೊನಾ ವಕ್ಕರಿಸಿತ್ತು. ಆಗ ಪರಿಸ್ಥಿತಿ ತುಂಬಾ ಸೀರಿಯಸ್ ಆಗಿಬಿಡ್ತು. ಈ ಸನ್ನಿವೇಶದ ಆಧಾರದ ಮೇಲೆ ಕಥೆ ಬರೆದಿದ್ದೇನೆ. ನಾನು ಕಿರುಚಿತ್ರಗಳು, ಧಾರಾವಾಹಿ ಮಾಡಿದ್ದೇನೆ. ಈ ಮೊದಲ ಮಲಯಾಳಂ, ತಮಿಳು ಸಿನಿಮಾದಲ್ಲಿ ನಟಿಸಿದ್ದೇನೆ. ಇದು ನನ್ನ ಮೂರನೇ ಚಿತ್ರ. ಈ ಸಿನಿಮಾಗೆ ಕಥೆ ಬರೆದು ನಿರ್ಮಾಣ ಮಾಡಿರುವುದರ ಜೊತೆಗೆ ನಟನೆ ಕೂಡ ಮಾಡಿರುವುದಾಗಿ ಹೇಳಿದರು.