ಸೆಲೆಬ್ರಿಟಿಗಳ ಜನಪ್ರಿಯತೆ ಅಳೆಯಲು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಕರ ಸಂಖ್ಯೆ ಕೂಡಾ ಒಂದು ಮಾನದಂಡ. ಇನ್‌ಸ್ಟಾಗ್ರಾಮ್, ಫೇಸ್ಬುಕ್, ಟ್ವಿಟರ್ನಲ್ಲಿ ಹಿಂಬಾಲಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಸೆಲೆಬ್ರಿಟಿಗಳು ನಾನಾ ಕಸರತ್ತು ಮಾಡುತ್ತಾರೆ. ಹಲವು ವಿಭಿನ್ನ ಪೋಸ್ಟ್ ಹಾಕುತ್ತಾ ಗಮನ ಸೆಳೆಯುತ್ತಾರೆ. ಈಗ ಅಮೆರಿಕನ್ ಖ್ಯಾತ ಗಾಯಕಿ ಸೆಲೀನ ಗೊಮೆಜ್ 400 ಮಿಲಿಯನ್ ಹಿಂಬಾಲಕರನ್ನು ಹೊಂದುವ ಮೂಲಕ ಇನ್ಸ್ಟಾಗ್ರಾಮ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ಗೊಮೆಜ್ ಅವರಿಗಿಂತ ಕೇವಲ ಇಬ್ಬರು ಮಾತ್ರ ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದಾರೆ. ಮಾರ್ಚ್ 18 ರಂದು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ್ದ ಮೊದಲ ಮಹಿಳೆ ಪಾಪ್ ತಾರೆ ಕೈಲೀ ಜೆನ್ನರ್ ಅವರನ್ನು ಹಿಂದಿಕ್ಕಿ ಸಾಮಾಜಿಕ ಮಾಧ್ಯಮದಲ್ಲಿ ಗೋಮ್ಜ್ ಮೈಲಿಗಲ್ಲು ಸಾಧಿಸಿದ್ದಾರೆ. ಫುಟ್‌ಬಾಲ್ ಆಟಗಾರರಾದ ಕ್ರಿಶ್ಚಿಯಾನೋ ರೊನಾಲ್ಡೋ ಮತ್ತು ಲಿಯೋನೆಲ್ ಮೆಸ್ಸಿ ನಂತರ ಅವರು ಈಗ ವೇದಿಕೆಯಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿದ 3ನೇ ವ್ಯಕ್ತಿಯಾಗಿದ್ದಾರೆ.
ಪೋರ್ಚುಗೀಸ್ ಮೂಲದ ಫುಟ್ಬಾಲ್ ದಂತಕಥೆ ಕ್ರಿಶ್ಚಿಯಾನೋ ರೊನಾಲ್ಡೋ ಇನ್ಸ್ಟಾಗ್ರಾಮ್‌ನಲ್ಲಿ ಜಗತ್ತಿನಲ್ಲೇ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ. ಇವರು 563 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಮತ್ತೊಬ್ಬ ಖ್ಯಾತ ಫುಟ್ಬಾಲ್ ಆಟಗಾರ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ 2ನೇ ವ್ಯಕ್ತಿ. ಇವರು 443 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಖ್ಯಾತ ಮಾಡೆಲ್ ಕೈಲಿ ಜೆನ್ನರ್ ಅತಿ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಪೈಕಿ ಟಾಪ್ 4ನೇ ಸ್ಥಾನದಲ್ಲಿದ್ದರು. ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಮೊದಲ ಮಹಿಳೆಯಾಗಿದ್ದರು. ಆದರೆ ಈಗ ಜೆನ್ನರ್ 382 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ.
ಸೆಲೀನ ಗೊಮೆಜ್ ಖುಷಿ:ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದ ಗೊಮೆಜ್ ಭಾನುವಾರ ತಮ್ಮ ಅಭಿಮಾನಿಗಳಿಗೆ ಹೃತ್ಪೂರ್ವಕ ಮೆಚ್ಚುಗೆಯ ಪೋಸ್ಟ್ ಹಂಚಿಕೊಂಡಿದ್ದಾರೆ. "ಎಲ್ಲ 400 ಮಿಲಿಯನ್ ಜನರನ್ನು ತಬ್ಬಿಕೊಳ್ಳಲು ಬಯಸುತ್ತೇನೆ" ಎಂದು ಶೀರ್ಷಿಕೆ ನೀಡಿದ್ದಾರೆ. ಪ್ರಸ್ತುತ ಇವರು ಇನ್ಸ್ಟಾಗ್ರಾಮ್‌ನಲ್ಲಿ 401 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.