ಬಾಲಿವುಡ್ ರೊಮ್ಯಾಂಟಿಂಕ್ ಲವ್ಸ್ಟೋರಿ ಸತ್ಯಪ್ರೇಮ್ ಕಿ ಕಥಾ ಸಿನಿಮಾ ಗುರುವಾರ ಈದ್ ಶುಭ ಸಂದರ್ಭ ತೆರೆಕಂಡಿತು. ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಆರಂಭವನ್ನೂ ಕಂಡಿದೆ. ಬಾಲಿವುಡ್ ಸ್ಟಾರ್ಸ್ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಮುಖ್ಯಭೂಮಿಕೆಯ ಸತ್ಯಪ್ರೇಮ್ ಕಿ ಕಥಾ ಮೊದಲ ದಿನ 10 ಕೋಟಿ ರೂ. ಗಳಿಸುವಲ್ಲಿ ಯಶಸ್ವಿ ಆಗಿದೆ. ಅದಾಗ್ಯೂ, ಸಮೀರ್ ವಿದ್ವಾನ್ಸ್ ನಿರ್ದೇಶನದ ಈ ಚಲನಚಿತ್ರವು 2ನೇ ದಿನ ಕಲೆಕ್ಷನ್ ಸಂಖ್ಯೆಯಲ್ಲಿ ಕೊಂಚ ಕುಸಿತ ಕಂಡಿದೆ. ಸಿನಿಮಾ ತೆರೆ ಕಂಡ ಎರಡನೇ ದಿನ 7.20 ಕೋಟಿ ರೂ. ಕಲೆಕ್ಷನ್ ಮಾಡುವಲ್ಲಿ ಯಶಸ್ವಿ ಆಗಿದೆ.
ಸತ್ಯಪ್ರೇಮ್ ಕಿ ಕಥಾ ಕಲೆಕ್ಷನ್:ಆದಿಪುರುಷ್ ಮತ್ತು ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾಗಳು ಇನ್ನೂ ಥಿಯೇಟರ್‌ಗಳಲ್ಲಿ ಓಡುತ್ತಿರುವುದರಿಂದ, ಸತ್ಯಪ್ರೇಮ್ ಕಿ ಕಥಾ ಸಿನಿಮಾ ಸೋಲೋ ರಿಲೀಸ್ ಪ್ರಯೋಜನಗಳನ್ನು ಪಡೆಯಲಿಲ್ಲ. ಅದಾಗ್ಯೂ ಕಾರ್ತಿಕ್ ಮತ್ತು ಕಿಯಾರಾ ಅವರ ಲವ್ಸ್ಟೋರಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಪ್ರಭಾವಶಾಲಿ ಸಂಖ್ಯೆಯಲ್ಲಿ ಮುನ್ನುಗ್ಗುತ್ತಿದೆ. ಸಿನಿಮಾ ಬಿಡುಗಡೆ ಆದ ದಿನ ಈದ್ ರಜೆ ಇದ್ದ ಹಿನ್ನೆಲೆ ಸಿನಿಮಾ ಉತ್ತಮ ಆರಂಭ ಪಡೆದಿದೆ. ಶುಕ್ರವಾರ ವಾರದ ದಿನ ಆದ ಹಿನ್ನೆಲೆ ಅಂಕಿ ಅಂಶ ಕೊಂಚ ಇಳಿದಿದೆ. ಆದರೂ 7.20 ಕೋಟಿ ರೂ. ಉತ್ತಮ ಅಂಕಿ ಅಂಶವೇ. ಇನ್ನೂ ಇಂದು ಮತ್ತು ನಾಳೆ ವಾರಾಂತ್ಯ ಆದ ಹಿನ್ನೆಲೆ ಸಿನಿಮಾ ಕಲೆಕ್ಷನ್ ಏರಲಿದೆ ಅಂತಾರೆ ಸಿನಿ ಪಂಡಿತರು.
ಸ್ಯಾಕ್ನಿಲ್ಕ್ ಮಾಹಿತಿ: ಸಿನಿ ಉದ್ಯಮದ ಟ್ರ್ಯಾಕರ್ ಸ್ಯಾಕ್ನಿಲ್ಕ್ (Sacnilk) ಪ್ರಕಾರ, ಸತ್ಯಪ್ರೇಮ್ ಕಿ ಕಥಾ ಬಾಕ್ಸ್ ಆಫೀಸ್‌ನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಸುಮಾರು 7.20 ಕೋಟಿ ರೂ. ಗಳಿಸಿದೆ. ಚಿತ್ರವು ಮಿಶ್ರ ವಿಮರ್ಶೆಗಳನ್ನು ಗಳಿಸಿದ್ದೂ, ಪಾಸಿಟಿವ್ ಟಾಕ್ ಸಿನಿಮಾಗೆ ಪ್ರಯೋಜನ ಆಗಿದೆ. 2ನೇ ದಿನದಂದು, ಕಾರ್ತಿಕ್ ಮತ್ತು ಕಿಯಾರಾ ಅಭಿನಯದ ಈ ಸಿನಿಮಾ ಶುಕ್ರವಾರದಂದು 14.31% ಆಕ್ಯುಪೆನ್ಸಿ (ಪ್ರೇಕ್ಷಕರ ಸಂಖ್ಯೆ) ಹೊಂದಿತ್ತು. ಆರಂಭಿಕ ದಿನದಂದು ಆಕ್ಯುಪೆನ್ಸಿ ರೇಟ್ 18.67% ರಷ್ಟಿತ್ತು.