ಇಂದೋರ್ (ಮಧ್ಯಪ್ರದೇಶ):ಉಜ್ಜಯಿನಿಯ ಪ್ರಸಿದ್ಧ ಮಹಾಕಾಲ್ ದೇವಾಲಯಕ್ಕೆ ಭೇಟಿ ನೀಡಿದ ನಂತರ ಸಿಕ್ಕಾಪಟ್ಟೆ ಟ್ರೋಲ್‌ಗಿರಿಗೆ ಒಳಗಾದ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಇದೀಗ ತಕ್ಕ ತಿರುಗೇಟು ಕೊಟ್ಟಿದ್ದಾರೆ. ಸಾರಾ ಅಲಿ ಖಾನ್ ಮತ್ತು ವಿಕ್ಕಿ ಕೌಶಲ್ ಅಭಿನಯದ ಜರಾ ಹಟ್ಕೆ ಜರಾ ಬಚ್ಕೆ (Zara Hatke Zara Bachke) ಸಿನಿಮಾ ನಾಳೆ ಅದ್ಧೂರಿಯಾಗಿ ತೆರೆಕಾಣಲಿದೆ. ಕಳೆದ ಕೆಲವು ದಿನಗಳಿಂದ ಚಿತ್ರತಂಡ ಪತ್ರಿಕಾಗೋಷ್ಟಿಯಲ್ಲಿ ಬ್ಯುಸಿಯಾಗಿದೆ. ವಿಕ್ಕಿ ಮತ್ತು ಸಾರಾ ನಿರಂತರವಾಗಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಸಿನಿಮಾ ಪ್ರಚಾರದ ವೇಳೆ ಮುಸಲ್ಮಾನರಾಗಿರುವ ನಟಿ ಸಾರಾ ಅಲಿ ಖಾನ್ ತಾವು ದೇವಸ್ಥಾನಗಳಿಗೆ ಭೇಟಿ ಕೊಡುವ ವಿಚಾರದ ಕುರಿತು ಮಾತನಾಡಿದರು.
"ನಾನು ನನ್ನ ಕೆಲಸವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇನೆ. ಜನರಿಗಾಗಿ, ನಿಮಗಾಗಿ ಕೆಲಸ ಮಾಡುತ್ತೇನೆ. ನನ್ನ ಕೆಲಸ ನಿಮಗೆ ಇಷ್ಟವಾಗದಿದ್ದರೆ ನನಗೆ ದುಃಖವಾಗುತ್ತದೆ. ಆದರೆ, ನನ್ನ ವೈಯಕ್ತಿಕ ನಂಬಿಕೆಗಳು ನನ್ನದೇ ಆಗಿರುತ್ತವೆ. ನಾನು ಬಾಂಗ್ಲಾ ಸಾಹಿಬ್ ಅಥವಾ ಮಹಾಕಾಲ್‌ಗೆ ಹೋಗುವಾಗ ಇರುವ ಅದೇ ಭಕ್ತಿಯಲ್ಲಿ ನಾನು ಅಜ್ಮೀರ್ ಶರೀಫ್‌ಗೂ ಹೋಗುತ್ತೇನೆ. ನಾನು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದನ್ನು ಮುಂದುವರಿಸುತ್ತೇನೆ. ಜನರು ಏನು ಬೇಕಾದರೂ ಹೇಳಬಹುದು, ನನಗೆ ಯಾವುದೇ ತೊಂದರೆ ಇಲ್ಲ. ಯಾವುದೇ ಸ್ಥಳದ ಶಕ್ತಿ ನಿಮಗೆ ಇಷ್ಟವಾಗಬೇಕು, ನಾನು ಆ ಶಕ್ತಿಯಲ್ಲಿ ನಂಬಿಕೆ ಹೊಂದಿದ್ದೇನೆ" ಎಂದು ತಿಳಿಸಿದ್ದಾರೆ.
ದೇವಸ್ಥಾನಗಳಿಗೆ ಭೇಟಿ ನೀಡಿದ ನಂತರ ಟ್ರೋಲ್ ಆಗುವುದು ಇದೇ ಮೊದಲಲ್ಲ. ಇತ್ತೀಚೆಗೆ, ಮಹಾದೇವ್ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಸಾಮಾಜಿಕ ಮಾಧ್ಯಮದಲ್ಲಿ ನಟಿ ಟೀಕೆಗಳನ್ನು ಎದುರಿಸಿದ್ದರು. ಆದ್ರೆ ನಕಾರಾತ್ಮಕ ವಿಷಯಗಳಿಗೆ ಕಿವಿಗೊಡದೇ ಮುಂದುವರಿಯುತ್ತಿದ್ದಾರೆ. ನಟಿಯ ಸಕಾರಾತ್ಮಕತೆಗೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.