ಭಾರತೀಯ ಚಿತ್ರರಂಗದಲ್ಲಿ ಕನ್ನಡ ಸಿನಿಮಾಗಳು ಸದ್ದು ಮಾಡುತ್ತಿವೆ. ಅದ್ಧೂರಿ ಮೇಕಿಂಗ್, ಕಥೆಯ ವಿಷಯದಲ್ಲಿ ಚಿತ್ರಗಳು ಫಸ್ಟ್ ಕ್ಲಾಸ್. ಯಾವ ಭಾಷೆಗೂ ಕಮ್ಮಿ ಇಲ್ಲ ಎನ್ನುವಷ್ಟರ ಮಟ್ಟಿಗೆ ಸ್ಯಾಂಡಲ್ವುಡ್ ಸಿನಿಮಾಗಳು ನಿರ್ಮಾಣವಾಗುತ್ತಿದೆ. ಧ್ರುವ ಸರ್ಜಾ ಮತ್ತು ಪ್ರೇಮ್ ಕಾಂಬಿನೇಶನ್ನಲ್ಲಿ ಮೂಡಿ ಬರಲಿರುವ 'ಕೆಡಿ' (KD) ಸಿನಿಮಾ ಮೇಕಿಂಗ್ ಮತ್ತು ಟೈಟಲ್ನಿಂದಲೇ ಗಮನ ಸೆಳೆದಿದೆ. ಅಲ್ಲದೇ ಬಾಲಿವುಡ್ ಖಳ ನಾಯಕ ಸಂಜಯ್ ದತ್ ಮತ್ತು ದಂತದ ಗೊಂಬೆ ಶಿಲ್ಪಾ ಶೆಟ್ಟಿ 'ಕೆಡಿ' ಅಡ್ಡಾಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಯಾಂಡಲ್ವುಡ್ನ ಈ ಪ್ಯಾನ್ ಇಂಡಿಯಾ ಚಲನಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಕೆಡಿ ಚಿತ್ರೀಕರಣದಲ್ಲಿ ತೊಡಗಿದ್ದ ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್ ಅವರು ಬಾಂಬ್ ಸ್ಫೋಟ ಸರಣಿಯ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಾಂಬ್ ಸ್ಫೋಟದ ದೃಶ್ಯವನ್ನು ಚಿತ್ರೀಕರಿಸುವಾಗ, ಸಂಜಯ್ ದತ್ ಅವರ ಮೊಣ ಕೈ, ಕೈ ಮತ್ತು ಮುಖದ ಮೇಲೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಘಟನೆಯ ನಂತರ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ಫೈಟ್ ಮಾಸ್ಟರ್ ಡಾ. ರವಿವರ್ಮ ಚಿತ್ರಕ್ಕೆ ಆ್ಯಕ್ಷನ್ ಸೀಕ್ವೆನ್ಸ್ ಕಂಪೋಸ್ ಮಾಡುತ್ತಿದ್ದಾಗ ಈ ಅಹಿತಕರ ಘಟನೆ ನಡೆದಿದೆ.
ನಿನ್ನೆ ನಡೆದ ಘಟನೆ ಇಂದು ಬೆಳಕಿಗೆ ಬಂದಿದ್ದು, ದುರಂತದ ನಿಖರ ಮಾಹಿತಿ ತಿಳಿದುಬಂದಿಲ್ಲ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಗಾಯಗಳಿಗೆ ನಟ ಚಿಕಿತ್ಸೆ ಪಡೆದಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರರಂಗದ ಮೂಲಗಳು ವಿವರಿಸಿವೆ. ಕೆಜಿಎಫ್ ಚಾಪ್ಟರ್ 1 ಮತ್ತು 2ರ ನಂತರ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ ನಟ ಸಂಜಯ್ ದತ್ ವಿಲನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಕೆ ಡಿ ಚಿತ್ರವನ್ನು ಪ್ರೇಮ್ ನಿರ್ದೇಶಿಸುತ್ತಿದ್ದಾರೆ ಮತ್ತು ಕೆವಿಎನ್ ಬ್ಯಾನರ್ ಅಡಿ ನಿರ್ಮಿಸಲಾಗುತ್ತಿದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
1970ರ ಕಾಲಘಟ್ಟದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸಂಜು ಬಾಬಾ ಪ್ರಮುಖ ವಿಲನ್. 40 ದಿನಗಳ ಶೂಟಿಂಗ್ ನಿಗದಿ ಆಗಿತ್ತು. ಫೆಬ್ರವರಿಯಿಂದಲೇ ಕೆ.ಡಿ ಶೂಟಿಂಗ್ ಆರಂಭಿಸಿರುವ ಸಂಜಯ್ ದತ್ ಮೊದಲ ಶೆಡ್ಯೂಲ್ ಮುಗಿಸಿದ್ದರು. ಎರಡನೇ ಹಂತದ ಶೂಟಿಂಗ್ನಲ್ಲಿ ಈ ಘಟನೆ ನಡೆದಿದೆ.