ಬಾಲಿವುಡ್ ಬಹುಬೇಡಿಕೆ ತಾರೆಯರಾದ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಮುಖ್ಯಭೂಮಿಕೆಯ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನವಾಗಿ ಪ್ರಚಾರ ಪ್ರಾರಂಭಿಸಿದೆ. ಮನೀಶ್ ಶರ್ಮಾ ನಿರ್ದೇಶನದ ಸ್ಪೈ ಆ್ಯಕ್ಷನ್ ಥ್ರಿಲ್ಲರ್ 'ಟೈಗರ್ 3'ರ ಲೇಕೆ ಪ್ರಭು ಕಾ ನಾಮ್ ಸಾಂಗ್ ಸೋಮವಾರ ಅನಾವರಣಗೊಳ್ಳಲಿದೆ.
ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರ ಗಮನ ಸೆಳೆಯುವ ನಿಟ್ಟಿನಲ್ಲಿ, ನಿನ್ನೆ 'ಲೇಕೆ ಪ್ರಭು ಕಾ ನಾಮ್' ಹಾಡಿನ ಟೀಸರ್ ಅನಾವರಣಗೊಳಿಸಲಾಗಿತ್ತು. ಅದಕ್ಕೂ ಮುನ್ನ ಪೋಸ್ಟರ್ ಹಂಚಿಕೊಂಡು ಸಾಂಗ್ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿತ್ತು. ಇಂದು ನಾಯಕ ನಟ ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಕತ್ರಿನಾ ಕೈಫ್ ಅವರ ಮನಮೋಹಕ ಫೋಟೋ ಶೇರ್ ಮಾಡಿದ್ದಾರೆ. ಅಲ್ಲದೇ, ಕ್ಯಾಟ್ ಜೊತೆ ಡ್ಯಾನ್ಸ್ ಮಾಡಿರೋದರ ಬಗ್ಗೆ ಹರ್ಷ ಹಂಚಿಕೊಂಡಿದ್ದಾರೆ. ಪೋಸ್ಟರ್, ಟೀಸರ್ಗಳನ್ನು ಗಮನಿಸಿದರೆ ಇದೊಂದು ಪಾರ್ಟಿ ಸಾಂಗ್ ಅನ್ನೋದು ಪಕ್ಕಾ ಆಗಿದ್ದು, ಕತ್ರಿನಾ ಕೈಫ್ ಬಹಳ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಶೇರ್ ಮಾಡಿದ ಸಲ್ಮಾನ್ ಖಾನ್, "ಕ್ಯಾಟ್ ಯೂ ಕಿಲ್ಡ್ ಇಟ್. ನಿಮ್ಮೊಂದಿಗೆ ಡ್ಯಾನ್ಸ್ ಮಾಡೋದು ಯಾವಾಗಲೂ ಖುಷಿಯ ವಿಚಾರ. 'ಲೇಕೆ ಪ್ರಭು ಕಾ ನಾಮ್' ಪಾರ್ಟಿ ಟ್ರ್ಯಾಕ್ ಅನ್ನು ಸೋಮವಾರದಂದು ವೀಕ್ಷಿಸಿ. ಟೈಗರ್ 3 ನವೆಂಬರ್ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ" ಎಂದು ಬರೆದಿದ್ದಾರೆ. ಬ್ಲ್ಯಾಕ್ ಶಾರ್ಟ್ ಡ್ರೆಸ್ನಲ್ಲಿ ಕತ್ರಿನಾ ಕೈಫ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.