ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬಿರುಗಾಳಿ ಎಬ್ಬಿಸಿದೆ. ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿರುವ 'ಸಲಾರ್' ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿದೆ.
ತೆರೆಕಂಡ ಮೊದಲ ದಿನವೇ ಬರೋಬ್ಬರಿ 175 ಕೊಟಿ ರೂ. ಗಳಿಸುವ ಮೂಲಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರ 2023ರಲ್ಲಿ ಭರ್ಜರಿ ಓಪನಿಂಗ್ ಪಡೆದ ಸಿನಿಮಾ ಆಗಿ ಹೊರಹೊಮ್ಮಿದೆ. ಈ ಮೂಲಕ ಪ್ರಶಾಂತ್ ನೀಲ್, ಪ್ರಭಾಸ್, ಹೊಂಬಾಳೆ ಫಿಲ್ಮ್ಸ್ನ ಜನಪ್ರಿಯತೆ ದ್ವಿಗುಣಗೊಂಡಿದೆ.
ಬಹುನಿರೀಕ್ಷಿತ ಸಿನಿಮಾದ ಕಲೆಕ್ಷನ್ ಬೇಟೆ ಜೋರಾಗೇ ನಡೆಯುತ್ತಿದೆ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲ್ಮ್ಸ್ ಜೊತೆ ಪ್ಯಾನ್ ಇಂಡಿಯಾ ಸ್ಟಾರ್ ಕೈಜೋಡಿಸಿದ ಹಿನ್ನೆಲೆ 'ಸಲಾರ್' ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದವು. ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ಯಶ ಕಂಡಿದೆ. ಕೆಜಿಎಫ್ ನಂತರ ಭಾರಿ ನಿರೀಕ್ಷೆಗಳೊಂದಿಗೆ ಡಿಸೆಂಬರ್ 22ರಂದು ವಿಶ್ವಾದ್ಯಂತ ತೆರೆಕಂಡ ಈ ಸಿನಿಮಾ ಭಾರತದಲ್ಲೇ ಸರಿಸುಮಾರು 100 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ ಎಂದು ವರದಿಯಾಗಿದೆ.
ಹಲವು ದಿನಗಳಿಂದ ಪ್ರೇಕ್ಷಕರ ಗಮನ ಸೆಳೆದಿದ್ದ ಸಲಾರ್ ಶುಕ್ರವಾರ ಜಗತ್ತಿನ ವಿವಿಧ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಅಪಾರ ಸಂಖ್ಯೆಯ ಅಭಿಮಾನಿಗಳು ಸಿನಿಮಾವನ್ನು ಬಹಳ ಅದ್ಧೂರಿಯಾಗಿ ಸ್ವಾಗತಿಸಿದರು. ಗುರುವಾರ ಮಧ್ಯರಾತ್ರಿ 1 ಗಂಟೆಯಿಂದಲೇ ಥಿಯೇಟರ್ಗಳತ್ತ ಸೆಲೆಬ್ರೇಶನ್ ಶುರುವಾಗಿದ್ದವು. ನಿನ್ನೆಯಿಡೀ ಸೋಷಿಯಲ್ ಮೀಡಿಯಾಗಳಲ್ಲಿ ಸಲಾರ್ ಸೆಲೆಬ್ರೇಶನ್ನದ್ದೇ ಹವಾ. ಇದೀಗ ಸಿನಿಮಾದ ಗಳಿಕೆ ಬಹಿರಂಗಗೊಂಡು ಸಿನಿಪ್ರಿಯರು ಸೇರಿದಂತೆ ಚಿತ್ರರಂಗದವರ ಹುಬ್ಬೇರಿಸಿದೆ. ಸಲಾರ್' ಶುಕ್ರವಾರ ವಿಶ್ವಾದ್ಯಂತ 175 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ವರದಿಗಳು ಹೇಳಿವೆ.