ದಕ್ಷಿಣ ಚಿತ್ರರಂಗ ಸದ್ಯ 'ಸಲಾರ್' ಮೂಲಕ ಸದ್ದು ಮಾಡುತ್ತಿದೆ. ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 400 ಕೋಟಿ ರೂಪಾಯಿ ಗಡಿ ಸಮೀಪಿಸಿದೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಸೌತ್ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯಭೂಮಿಕೆಯ ಈ ಚಿತ್ರ ಮೊದಲ ವಾರಾಂತ್ಯದ ಬಳಿಕ, ವಾರದ ದಿನಗಳಲ್ಲಿ ಕೊಂಚ ಕುಸಿತ ಕಂಡಿತ್ತು. ಅದಾಗ್ಯೂ ಹೊಸ ವರ್ಷ ಸಂದರ್ಭದಲ್ಲಿ ಉತ್ತಮ ವ್ಯವಹಾರ ನಡೆಸಿದೆ.
ಇಲ್ಲಿ ಗಮನಾರ್ಹ ವಿಚಾರವೆಂದರೆ, ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 'ಲಿಯೋ' ಸಿನಿಮಾದ ಒಟ್ಟು ಕಲೆಕ್ಷನ್ ಮೀರಿಸಿದೆ. ಪ್ರಭಾಸ್ ಅವರದ್ದೇ ಆದ 'ಬಾಹುಬಲಿ: ದಿ ಬಿಗಿನಿಂಗ್'ನ ದಾಖಲೆ ಮುರಿಯಲು ಸಜ್ಜಾಗಿದೆ. ಅಲ್ಲದೇ ತಲೈವಾ ರಜನಿಕಾಂತ್ ಅಭಿನಯದ ಜೈಲರ್ ಚಿತ್ರದ ದಾಖಲೆಯನ್ನೂ ಕೂಡ ಇನ್ನೆರಡು ದಿನಗಳಲ್ಲಿ ಮುರಿಯುವ ಸಾಧ್ಯತೆ ಇದೆ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಸಲಾರ್ ತೆರೆಕಂಡ 11ನೇ ದಿನ (ಸೋಮವಾರ) 15.5 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ಭಾರತೀಯ ಬಾಕ್ಸ್ ಆಫೀಸ್‌ನಲ್ಲಾದ ಒಟ್ಟು ಕಲೆಕ್ಷನ್ 360.77 ಕೋಟಿ ರೂಪಾಯಿ. ತೆಲುಗು ಪ್ರೇಕ್ಷಕರು ಸಿನಿಮಾಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಸಿನಿಮಾದ ತೆಲುಗು ಆವೃತ್ತಿಯು ಶೇ. 48.75ರಷ್ಟು ಆಕ್ಯುಪೆನ್ಸಿ ದರ ಹೊಂದಿತ್ತು.
ಜಾಗತಿಕ ಮಟ್ಟದಲ್ಲಿ ಸಲಾರ್ ಸಿನಿಮಾ ಒಟ್ಟು 625 ಕೋಟಿ ರೂಪಾಯಿ ಗಳಿಸಿದೆ. ಬಾಹುಬಲಿ ಪಾರ್ಟ್ ಒನ್ ಸಿನಿಮಾದ ಒಟ್ಟು ಕಲೆಕ್ಷನ್ 650 ಕೋಟಿ ರೂ. ಆಗಿದ್ದು, ತಮ್ಮದೇ ದಾಖಲೆ ಮುರಿಯಲು ಪ್ರಭಾಸ್ ಸಜ್ಜಾಗಿದ್ದಾರೆ. ಬಾಹುಬಲಿ ಸರಣಿ ಸಿನಿಮಾಗಳ ಮೂಲಕ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ನಿಮಗೆ ತಿಳಿದೇ ಇದೆ. ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾಗಳ ಸಾಲಿನಲ್ಲಿ ಬಾಹುಬಲಿ ಇದೆ.