ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಕಾಂಬಿನೇಶನ್ನ ಬಹುನಿರೀಕ್ಷಿತ ಚಿತ್ರ 'ಸಲಾರ್'. ಡಿಸೆಂಬರ್ 22ರಂದು ಸಲಾರ್ ತೆರೆಗಪ್ಪಳಿಸಲಿದೆ. ರಿಲೀಸ್ಗೆ ಇನ್ನೆರಡೇ ದಿನ ಬಾಕಿ ಉಳಿದಿದ್ದು, ಸಿನಿಮಾ ಸುತ್ತಲಿನ ನಿರೀಕ್ಷೆ ಗರಿಗೆದರಿದೆ. ಬಹುನಿರೀಕ್ಷಿತ ಚಿತ್ರ ಬಿಡುಗಡೆಗೂ ಮುನ್ನವೇ ದಾಖಲೆ ಬರೆಯುತ್ತಿದೆ.
ಸಿನಿಮಾದ ಮುಂಗಡ ಬುಕ್ಕಿಂಗ್ ಪ್ರಕ್ರಿಯೆ ಜೋರಾಗೇ ನಡೆಯುತ್ತಿದೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಸೇರಿ ಸಿನಿಮಾ ಮಾಡಿರೋ ಹಿನ್ನೆಲೆ 'ಸಲಾರ್' ಟಿಕೆಟ್ಗಳು ಶರವೇಗದಲ್ಲಿ ಮಾರಾಟವಾಗುತ್ತಿದೆ. ಹೊರದೇಶಗಳಲ್ಲಿ ಕೂಡ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅದಾಗ್ಯೂ, ಅನೇಕ ದೇಶಗಳಲ್ಲಿ ಇನ್ನಷ್ಟೇ ಅಡ್ವಾನ್ಸ್ ಟಿಕೆಟ್ ಪ್ರೊಸೆಸ್ ಓಪನ್ ಆಗಬೇಕಷ್ಟೇ. ಸದ್ಯ ವಿಶ್ವದಾದ್ಯಂತ ಮುಂಗಡ ಬುಕ್ಕಿಂಗ್ನಲ್ಲಿ 'ಸಲಾರ್' 21 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.
ಉತ್ತರ ರಾಜ್ಯಗಳಲ್ಲಿ 'ಸಲಾರ್' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಭಾನುವಾರ (ಡಿಸೆಂಬರ್ 17) ಆರಂಭವಾಗಿದೆ. ಇಲ್ಲಿ ಸಲಾರ್ ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಟಿಕೆಟ್ಗಳು ಖರೀದಿಯಾಗಿವೆ. ಹಿಂದಿಯಲ್ಲಿ 15 ಸಾವಿರ ಟಿಕೆಟ್ಗಳು ಮಾರಾಟವಾಗಿವೆ. ಇತರೆ ಭಾಷೆಗಳ 10,000ಕ್ಕೂ ಹೆಚ್ಚು ಟಿಕೆಟ್ಗಳನ್ನು ಪ್ರೇಕ್ಷಕರು ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಪಿವಿಆರ್ ಮತ್ತು ಐನಾಕ್ಸ್ ಸ್ಕ್ರೀನ್ಗಳಲ್ಲಿ ಸುಮಾರು 25 ಸಾವಿರ ಅಡ್ವಾನ್ಸ್ ಟಿಕೆಟ್ಗಳು ಬುಕ್ ಆಗಿವೆ. ಈ ಮೂಲಕ 5 ಕೋಟಿ ರೂ.ಗೂ ಹೆಚ್ಚಿನ ವ್ಯವಹಾರ ನಡೆದಂತಿದೆ. ಆದರೆ, ಮೊದಲ ದಿನದ ಮುಂಗಡ ಬುಕಿಂಗ್ನ ಕಲೆಕ್ಷನ್ 4.29 ಕೋಟಿ ರೂಪಾಯಿ ಆಗಿದೆ ಎಂದು ವರದಿಯಾಗಿದೆ.