ಹೈದರಾಬಾದ್ (ತೆಲಂಗಾಣ):ಎಸ್.ಎಸ್.ರಾಜಮೌಳಿ ನಿರ್ದೇಶನದ ತೆಲುಗು ಸಿನಿಮಾ ಆರ್ಆರ್ಆರ್ ಜಾಗತಿಕ ಸಿನಿಮಾ ರಂಗದಲ್ಲಿ ಇತಿಹಾಸ ನಿರ್ಮಿಸಿದೆ. ಸಿನಿಮಾ ಕ್ಷೇತ್ರದಲ್ಲಿ ನೀಡಲಾಗುವ ಪರಮೋಚ್ಛ ಪ್ರಶಸ್ತಿಯಾದ ಆಸ್ಕರ್ ಗಳಿಸಿದೆ. ಲಾಸ್ ಏಂಜಲಿಸ್ನಲ್ಲಿ ನಡೆದ ಸಮಾರಂಭದಲ್ಲಿ, "ನಾಟು ನಾಟು ಹಾಡು" ಅತ್ಯುತ್ತಮ ಮೂಲಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗಳಿಸಿದೆ. ಈ ಸಿನಿಮಾದ ಚಿತ್ರಕಥೆಗಾರ ಮತ್ತು ರಾಜ್ಯಸಭಾ ಸದಸ್ಯ ವಿ.ವಿಜಯೇಂದ್ರ ಪ್ರಸಾದ್ ಅವರು ಇದನ್ನು "ಭಾರತ ಚಿತ್ರರಂಗದ ವಿಜಯೋತ್ಸವದ ದಿನ" ಎಂದು ಬಣ್ಣಿಸಿದ್ದಾರೆ.
ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸಿನಿಮಾದ ಯಶಸ್ಸು ಮತ್ತು ಅದಕ್ಕೆ ಸಿಕ್ಕ ಗೌರವದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅಲ್ಲದೇ, ತಾವು ರಾಜ್ಯಸಭಾ ಸದಸ್ಯನಾದ ಬಗ್ಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಸಂಭಾಷಣೆ ನಡೆಸಿದ ಬಗ್ಗೆಯೂ ಹೇಳಿಕೊಂಡಿದ್ದಾರೆ.
ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ತಂದೆಯೂ ಆಗಿರುವ ವಿ.ವಿಜಯೇಂದ್ರ ಪ್ರಸಾದ್ ಅವರು 2022ರಲ್ಲಿ ಸಂಸತ್ತಿನ ಮೇಲ್ಮನೆಗೆ ನಾಮನಿರ್ದೇಶನವಾಗಿದ್ದರು. ಸಾಹಿತ್ಯ, ಸಿನಿಮಾ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ಪರಿಗಣಿಸಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಗೆ ಶಿಫಾರಸು ಮಾಡಿದ ನಾಲ್ವರು ಸದಸ್ಯರಲ್ಲಿ ವಿಜಯೇಂದ್ರ ಪ್ರಸಾದ್ ಅವರೂ ಒಬ್ಬರಾಗಿದ್ದರು.
"ಜುಲೈ 6 ರಂದು ಪ್ರಧಾನ ಮಂತ್ರಿ ಕಚೇರಿಯಿಂದ ನನಗೆ ಕರೆ ಬಂದಿತು. ನಿಮಗೆ ಕೆಲವು ಜವಾಬ್ದಾರಿಯನ್ನು ವಹಿಸಲು ಸರ್ಕಾರ ಮುಂದಾಗಿದೆ ಎಂದು ವಿವರಿಸಿದರು. ಆದರೆ, ಇದ್ಯಾವುದರ ಬಗ್ಗೆ ಮಾಹಿತಿ ಇಲ್ಲದ ನಾನು ಸುಮ್ಮನಾದೆ. ಬಳಿಕ ಜುಲೈ 7 ರಂದು ಪಿಎಂಒದಿಂದ ಮತ್ತೊಂದು ಕರೆ ಬಂದಿತು. ಅತ್ತ ಕಡೆಯಿಂದ ಅಧಿಕಾರಿಯೊಬ್ಬರು ಪ್ರಧಾನಿ ಮೋದಿ ಅವರು ನಿಮ್ಮೊಂದಿಗೆ ಮಾತನಾಡಲು ಬಯಸುತ್ತಾರೆ ಎಂದು ಹೇಳಿದರು. ಇದು ನನಗೆ ಸಂತಸದ ಕ್ಷಣ ಎಂದೇ ಭಾಸವಾಯಿತು".
"ಪ್ರಧಾನಿ ಮೋದಿ ಅವರು ಹಿಂದಿಯಲ್ಲಿ ಮಾತನಾಡಲು ಪ್ರಾರಂಭಿಸಿದರು. ಆದರೆ, ತನಗೆ ಹಿಂದಿ ಬರುವುದಿಲ್ಲ ಎಂದ ಬಳಿಕ, ಅವರು ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತನಾಡಿದರು. ನನಗೆ ರಾಜ್ಯಸಭಾ ಸ್ಥಾನವನ್ನು ನೀಡಿದ ಬಗ್ಗೆಯೂ ವಿವರಿಸಿದರು. 'ರಾಷ್ಟ್ರಪತಿ ನಿಮಗೆ ರಾಜ್ಯಸಭೆ ಸ್ಥಾನ ನೀಡಲು ಬಯಸಿದ್ದಾರೆ ಎಂದು ಮೋದಿ ಅವರು ತಿಳಿಸಿದರು. ಆ ಕ್ಷಣ ನನಗೆ ಅದಮ್ಯ ಎನ್ನಿಸಿತು" ಎಂದು ಹೇಳಿದರು.
ಸಾಗರದಾಚೆ ಭಾರತೀಯ ಸಿನಿಮಾಗಳ ಹವಾ: "ಮೊದಮೊದಲು ಭಾರತೀಯ ಸಿನಿಮಾಗಳು ಸಾಗರದಾಚೆ ಅಬ್ಬರಿಸುತ್ತಿಲ್ಲ ಎಂಬ ಕೊರಗಿತ್ತು. ಹಾಲಿವುಡ್ ಮಾದರಿಯ ಸಿನಿಮಾಗಳು ನಮ್ಮಲ್ಲಿ ಇದ್ದರೂ ಅವುಗಳು ಹೆಚ್ಚಿನ ಪ್ರಚಾರ ಪಡೆಯುತ್ತಿರಲಿಲ್ಲ. ಭಾರತ ಉಪಖಂಡದಲ್ಲಿ ನಮ್ಮ ಸಿನಿಮಾಗಳು ಪ್ರದರ್ಶನವೇ ಕಾಣುತ್ತಿರಲಿಲ್ಲ. ಇದೀಗ ನಮ್ಮ ಸಿನಿಮಾ ಆರ್ಆರ್ಆರ್ ಆಸ್ಕರ್ ಗಳಿಸಿದ್ದು, ಭಾರತದ ವಿಜಯದ ಕ್ಷಣವಾಗಿದೆ.ಈ ವೈಭವದ ಕ್ಷಣವನ್ನು ಭಾರತೀಯರಾದ ನಾವು ಆಚರಿಸಬೇಕು. ಕಾರಣ ಅಂತಿಮವಾಗಿ ನಮ್ಮಲ್ಲಿರುವ ಪ್ರತಿಭೆ ಗೆದ್ದಿವೆ. ಅದಕ್ಕಾಗಿ ಸಂಭ್ರಮಾಚರಣೆ ಮಾಡಬೇಕು" ಎಂದು ಹೇಳಿದ್ದಾರೆ.
"ಕೆಲವೊಮ್ಮೆ ನನ್ನ ಮಗ (ರಾಜಮೌಳಿ) ಭಾರತವು ಯಾವ ವಿಭಾಗದಲ್ಲಿ ವಿಶ್ವದ ಉಳಿದ ರಾಷ್ಟ್ರಗಳಿಗಿಂತ ಅತ್ಯುತ್ತಮ ಎಂದು ಪ್ರಶ್ನಿಸುತ್ತಾನೆ. ನಮ್ಮ ದೇಶದ ಪರಂಪರೆ, ಸೊಗಡು ಅಡಗಿರುವುದು ನಾವು ಕಥೆ ಹೇಳುವಿಕೆಯಲ್ಲಿದೆ ಎಂದು ಉತ್ತರಿಸುವೆ. ರಾಜಮೌಳಿ ಖ್ಯಾತ ಚಲನಚಿತ್ರ ನಿರ್ಮಾಪಕ ಸ್ಟೀವನ್ ಸ್ಪೀಲ್ಬರ್ಗ್ ಅವರೊಂದಿಗೆ ಮಾತುಕತೆ ನಡೆಸಿದ್ದಾನೆ. ಸಿನಿಮಾ ಚಿತ್ರೀಕರಣದಲ್ಲಿ ಯಾವುದೇ ರಾಜಿಗೆ ಹೋಗಬೇಡಿ ಎಂದು ಸಲಹೆ ನೀಡಿದ್ದಾರೆ. ನಮ್ಮ ಕಥೆ ಹೇಳುವ ಸಂಸ್ಕೃತಿಯೇ ನಮ್ಮ ಜೀವಾಳ. RRR ನ ಮುಂದಿನ ಭಾಗದ ಸಿದ್ಧತೆ ನಡೆಸುತ್ತಿದ್ದೇವೆ" ಎಂದು ಇದೇ ವೇಳೆ ಮಾಹಿತಿ ನೀಡಿದರು.
ಆರ್ಆರ್ಆರ್ ಸಿನಿಮಾದ ಪ್ರಸಿದ್ಧ ಹಾಡು 'ನಾಟು ನಾಟು' ಇತ್ತೀಚಿನ ದಿನಗಳಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಆಸ್ಕರ್ ಸ್ಪರ್ಧೆಗೆ ಪ್ರವೇಶಿಸುವ ಮೊದಲು, ಈ ಹಾಡು 'ಅತ್ಯುತ್ತಮ ಮೂಲ ಹಾಡು' ವಿಭಾಗದಲ್ಲಿ ಗೋಲ್ಡನ್ ಗ್ಲೋಬ್ ಅನ್ನು ಗೆದ್ದುಕೊಂಡರೆ, 28ನೇ ಆವೃತ್ತಿಯ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌ನಲ್ಲಿ ಎರಡು ಪ್ರಶಸ್ತಿಗಳನ್ನು ಪಡೆದುಕೊಂಡಿತು. ಅದರಲ್ಲಿ 'ಅತ್ಯುತ್ತಮ ಹಾಡು' ಮತ್ತು ಇನ್ನೊಂದು 'ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ' ವಿಭಾಗದಲ್ಲಿ ಪ್ರಶಸ್ತಿ ಗಳಿಸಿತ್ತು.
ಇದನ್ನೂ ಓದಿ:ಏಷ್ಯಾದ ಹಳೆಯ ಆನೆ ಶಿಬಿರದಲ್ಲಿ ಆಸ್ಕರ್ ವಿಜೇತ 'ದ ಎಲಿಫೆಂಟ್ ವಿಸ್ಪರರ್ಸ್' ನಿರ್ಮಾಣ