ಭಾರತದ ಹಿರಿಯ ಚಲನಚಿತ್ರ ನಿರ್ದೇಶಕ ಎಸ್ ಎಸ್ ರಾಜಮೌಳಿ ಸಾರಥ್ಯದಲ್ಲಿ ಮೂಡಿ ಬಂದ 'RRR' ಚಿತ್ರ ಇನ್ನೂ ತನ್ನ ಕ್ರೇಜ್ ಉಳಿಸಿಕೊಂಡಿದೆ. ಚಿತ್ರದ ಸೂಪರ್‌ಹಿಟ್ ಹಾಡು ನಾಟು ನಾಟು ಆಸ್ಕರ್ ಪ್ರಶಸ್ತಿ ಗೆದ್ದ ಬಳಿಕ ಚಿತ್ರದ ಜನಪ್ರಿಯತೆ ಸಾಗರದಾಚೆಗೂ ಹಬ್ಬಿದೆ. ಆಸ್ಕರ್ 2023 ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೊದಲು ಕೂಡ ಈ ಚಿತ್ರ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇದೀಗ 'ಆರ್‌ಆರ್‌ಆರ್' ಚಿತ್ರದ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ.
ಜಪಾನ್‌ನಲ್ಲಿ ಆರ್ಆರ್ಅರ್ ದಾಖಲೆ: ಹೌದು, ಈ ಸೂಪರ್ ಹಿಟ್ ಸಿನಿಮಾ ಜಪಾನ್‌ನಲ್ಲಿ ಇತಿಹಾಸ ಸೃಷ್ಟಿಸಿದೆ. ಕಳೆದ ಆರು ತಿಂಗಳಿನಿಂದ ಜಪಾನ್‌ನಲ್ಲಿ ಈ ಚಲನಚಿತ್ರವು ನಿರಂತರವಾಗಿ ಓಡುತ್ತಿದೆ. ಜಪಾನ್‌ನಲ್ಲಿ ದಶಲಕ್ಷಕ್ಕೂ ಹೆಚ್ಚು ವೀಕ್ಷಕರು ಸಿನಿಮಾ ವೀಕ್ಷಿಸಿದ್ದಾರೆ. ಆರ್‌ಆರ್‌ಆರ್ ಚಿತ್ರ ತಯಾರಕರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಜಪಾನ್‌ನಲ್ಲಿ ಈ ಚಲನಚಿತ್ರವು 209 ಪರದೆಗಳಲ್ಲಿ ಮತ್ತು 31 IMAX ಪರದೆಗಳಲ್ಲಿ 2022ರ ಅಕ್ಟೋಬರ್ನಲ್ಲಿ ಬಿಡುಗಡೆ ಆಗಿತ್ತು. ಜಪಾನ್‌ನಲ್ಲಿ ಇಷ್ಟೊಂದು ಜನಪ್ರಿಯತೆ ಸಂಪಾದಿಸಿದ ಮೊದಲ ಭಾರತೀಯ ಸಿನಿಮಾ ಇದಾಗಿದೆ. ಜಪಾನ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರ ಎಂಬ ಹೆಗ್ಗಳಿಕೆಯನ್ನೂ ಸಂಪಾದಿಸಿದೆ.
ಆರ್‌ಆರ್‌ಆರ್ ಟ್ವೀಟ್: ಆರ್‌ಆರ್‌ಆರ್ ತಯಾರಕರೂ ಕೂಡ ಟ್ವಿಟರ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. 164 ದಿನಗಳಲ್ಲಿ 1 ಮಿಲಿಯನ್ ವೀಕ್ಷಕರು ಚಿತ್ರ ವೀಕ್ಷಿಸಿದ್ದಾರೆ ಮತ್ತು ಇನ್ನೂ ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರು ಚಿತ್ರಮಂದಿರಗಳತ್ತ ಲಗ್ಗೆಯಿಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.