ವಿಶ್ವ ಸಿನಿ ಕ್ಷೇತ್ರದಲ್ಲೀಗ ಆರ್ಆರ್ಆರ್ ಸಿನಿಮಾದ್ದೇ ಚರ್ಚೆ. ನಮ್ಮ ಭಾರತೀಯ ಚಿತ್ರ ಸಾಗರದಾಚೆಗೂ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ದೂರದ ಅಮೆರಿಕದ ಥಿಯೇಟರ್ ಪ್ರೇಕ್ಷಕರಿಂದ ತುಂಬಿದ್ದು, ಆರ್ಆರ್ಆರ್ ತಂಡ ಹರ್ಷ ವ್ಯಕ್ತಪಡಿಸಿದೆ.
ಲಾಸ್ ಏಂಜಲೀಸ್‌ನ 'ದಿ ಥಿಯೇಟರ್ ಅಟ್ ಏಸ್ ಹೋಟೆಲ್'ನಲ್ಲಿ (the theatre at ace hotel) ಬುಧವಾರ ಆರ್ಆರ್ಆರ್ ಸಿನಿಮಾ ಪ್ರದರ್ಶನಗೊಂಡಿದೆ. ಬುಧವಾರ ಸಂಜೆ 7.30ಕ್ಕೆ (ಲಾಸ್ ಏಂಜಲೀಸ್ ಸಮಯ) ಆರ್ಆರ್ಆರ್ ಪ್ರದರ್ಶನ (ಭಾರತದ ಕಾಲಮಾನದ ಪ್ರಕಾರ ಸಂಜೆ 6 ಗಂಟೆಗೆ) ಇತ್ತು. 'ದಿ ಥಿಯೇಟರ್ ಅಟ್ ಏಸ್ ಹೋಟೆಲ್' 1,647 ಆಸನ ಸಾಮರ್ಥ್ಯವುಳ್ಳ ಫಿಲ್ಮ್ ಥಿಯೇಟರ್ ಆಗಿದ್ದು, ಕೆಲವೇ ಹೊತ್ತಿನಲ್ಲಿ ಟಿಕೆಟ್ಗಳು ಸೋಲ್ಡ್ ಔಟ್ ಆಗಿದ್ದವು.
ಭಾರತದ ಖ್ಯಾತ ನಿರ್ದೇಶಕ, ಸೂಪರ್ ಹಿಟ್ ಬಾಹುಬಲಿ ಖ್ಯಾತಿಯ ಎಸ್‌ಎಸ್ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿರುವ ಈ ಆರ್ಆರ್ಆರ್ ಚಿತ್ರ ಕಳೆದ ವರ್ಷ ಮಾರ್ಚ್ 25ರಂದು ಬಿಡುಗಡೆ ಆಗಿ ಭರ್ಜರಿ ಯಶಸ್ಸು ಕಂಡಿತು. ಈ ಮಾರ್ಚ್ 25ಕ್ಕೆ ಒಂದು ವರ್ಷ ಪೂರೈಸಲಿರುವ ಚಿತ್ರ 'ದಿ ಥಿಯೇಟರ್ ಅಟ್ ಏಸ್ ಹೋಟೆಲ್'ನಲ್ಲಿ ಪ್ರದರ್ಶನ ಕಂಡು ಪ್ರೇಕ್ಷಕರ ಸಿಳ್ಳೆ, ಚಪ್ಪಾಳೆಗೆ ಸಾಕ್ಷಿ ಆಯಿತು. ಆರ್ಆರ್ಆರ್ ತೆರೆ ಕಂಡು 342ನೇ ದಿನವೂ ಲಾಸ್ ಏಂಜಲೀಸ್ನಲ್ಲಿ ಚಿತ್ರಕ್ಕೆ ಉತ್ತಮ ಬೆಂಬಲ ಸಿಕ್ಕಿದ್ದು, ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹರ್ಷ ವ್ಯಕ್ತಪಡಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ಲಾಸ್ ಏಂಜಲೀಸ್‌ನ ಥಿಯೇಟರ್ ಫೋಟೋ, ವಿಡಿಯೋ ಹಂಚಿಕೊಂಡಿರುವ ಆರ್ಆರ್ಆರ್, ಸಿನಿಮಾ ಬಿಡುಗಡೆ ಆಗಿ 342ನೇ ದಿನವೂ ಸರತಿ ಸಾಲಿನಲ್ಲಿ ಪ್ರೇಕ್ಷಕರು ನಿಲ್ಲುವುದನ್ನು ನೋಡಲು ನಿಜಕ್ಕೂ ಸಂತೋಷವಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಇಂದು ಅಮೆರಿಕದ ಚಿತ್ರಮಂದಿರದಾದ್ಯಂತ ಆರ್ಆರ್ಆರ್ ರೀ ರಿಲೀಸ್ ಆಗಿದೆ.