'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಅನ್ನೋದು ಕನ್ನಡದ ಸೂಪರ್ ಹಿಟ್ ಸಿನಿಮಾ. 2022 ರಲ್ಲಿ ಕಾಂತಾರ, ಕೆಜಿಎಫ್ 2 ಮೂಲಕ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತಾಯ್ತು. 2023ರ ಸಿನಿಮಾಗಳ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಆದ್ರೆ ಕೆಜಿಎಫ್ 2, ಕಾಂತಾರದಷ್ಟು ಸದ್ದು ಮಾಡದೇ ಇದ್ದರೂ ಕೆಲ ಬೆರಳೆಣಿಕೆ ಸಂಖ್ಯೆಯ ಸಿನಿಮಾಗಳು ಹಿಟ್ ಸಾಲು ಸೇರಿವೆ.
'ಬಾಯ್ಸ್ ಹಾಸ್ಟೆಲ್' ಆ.26ಕ್ಕೆ ರಿಲೀಸ್:ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಪ್ರೇಕ್ಷಕರ ಮನಗೆದ್ದು ಸೂಪರ್ ಹಿಟ್ ಅಂತಾ ಕರೆಸಿಕೊಂಡ ಸಿನಿಮಾ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ'. ಕನ್ನಡಿಗರ ಹೃದಯ ಕದ್ದ ಇದೇ ಸಿನಿಮಾ ಪಕ್ಕದ ತೆಲುಗಿಗೂ ಡಬ್ ಆಗುತ್ತಿದೆ. ಇದೇ ಆ. 26 ಕ್ಕೆ ಆಂಧ್ರ ಮತ್ತು ತೆಲಂಗಾಣದಲ್ಲಿ 'ಬಾಯ್ಸ್ ಹಾಸ್ಟೆಲ್' ಟೈಟಲ್ ಅಡಿ ಕನ್ನಡದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರ ಬಿಡುಗಡೆ ಆಗಲಿದೆ.
ರಮ್ಯಾ ಪಾತ್ರಕ್ಕೆ ರಶ್ಮಿ ಗೌತಮ್:ನಿತಿನ್ ಕೃಷ್ಣಮೂರ್ತಿ ನಿರ್ದೇಶನದಲ್ಲಿ ಮೂಡಿಬಂದ ಚೊಚ್ಚಲ ಚಿತ್ರದಲ್ಲಿ ರಿಷಬ್ ಶೆಟ್ಟಿ, ದಿಗಂತ್, ಶೈನ್ ಶೆಟ್ಟಿ, ಪವನ್ ಕುಮಾರ್, ರಮ್ಯಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದ್ರೆ ಸ್ಯಾಂಡಲ್ವುಡ್ ಮೋಹಕತಾರೆ ರಮ್ಯಾ ನಿರ್ವಹಿಸಿದ್ದ ಲೆಕ್ಚರರ್ ಪಾತ್ರಕ್ಕೆ ತೆಲುಗಿನಲ್ಲಿ ನಟಿ ಕಂ ನಿರೂಪಕಿ ರಶ್ಮಿ ಗೌತಮ್ ಜೀವ ತುಂಬಲಿದ್ದಾರೆ. ಇನ್ನು, ಬಾಯ್ಸ್ ಹಾಸ್ಟೆಲ್ ಟೈಟಲ್ ಸಾಂಗ್ ಬಿಡುಗಡೆ ಆಗಿದೆ. ಎಂಟಿಆರ್ ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಹಾಡು ರಿಲೀಸ್ ಆಗಿದ್ದು, ತೆಲುಗು ಮಂದಿಯಿಂದ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.