ದೇಶ ಮಾತ್ರವಲ್ಲದೇ ಜಗತ್ತಿನಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಕಾಲಿವುಡ್ ಹಿರಿಯ ನಟ ರಜನಿಕಾಂತ್ ಮುಖ್ಯಭೂಮಿಕೆಯ ಜೈಲರ್ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿರುವ ಈ ಸಿನಿಮಾ ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಆಗಸ್ಟ್ 10 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ಜೈಲರ್ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವಲ್ಲಿ ಯಶಸ್ಸು ಕಂಡಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ, ಸನ್ ಪಿಕ್ಚರ್ಸ್ ನಿರ್ಮಾಣದ ಈ ಸಿನಿಮಾ ತೆರೆಕಂಡು ಒಂದು ತಿಂಗಳು ಪೂರ್ಣಗೊಳಿಸುವ ವೇಳೆ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ.
ಜೈಲರ್ ಸಿನಿಮಾ ಒಟಿಟಿ ಪ್ಲಾಟ್ಫಾರ್ಮ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಆಗಲಿದೆ. ಸೆಪ್ಟೆಂಬರ್ 7 ರಿಂದ ನೀವಿದ್ದಲ್ಲೇ ಕುಳಿತು ಸಿನಿಮಾ ವೀಕ್ಷಿಸಬಹುದಾಗಿದೆ. ಕುತೂಹಲಕಾರಿ ಅಂಶವೆಂದರೆ, ಬಿಡುಗಡೆಗೂ ಮುನ್ನ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿರುವ ಜವಾನ್ ಕೂಡ ಸೆಪ್ಟೆಂಬರ್ 7 ರಿಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಅಭಿಮಾನಿಗಳು ಯಾವ ಸಿನಿಮಾಗೆ ಮಣೆ ಹಾಕುತ್ತಾರೆಂಬುದನ್ನು ಕಾದು ನೋಡಬೇಕಿದೆ. ಪ್ರೇಕ್ಷಕರು ಚಿತ್ರಮಂದಿರದಲ್ಲಿ ಆನಂದಿಸಿದಂತೆ ಒಟಿಟಿಯಲ್ಲಿ ಕೂಡ ಸಿನಿಮಾವನ್ನು ವೀಕ್ಷಿಸಿ ಆನಂದಿಸಲಿದ್ದಾರೆ ಎಂದು ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ರೈಮ್ ಡ್ರಾಮಾ ಕುರಿತು ಇತ್ತೀಚೆಗೆ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಸಂದರ್ಶನವೊಂದರಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಅಲೆ ಎಬ್ಬಿಸಿದ ಕುರಿತು ಮಾತನಾಡಿ, ಜೈಲರ್ ಕೇವಲ ಒಂದು ಸಿನಿಮಾವಲ್ಲ. ನಾನಾ ಭಾವನೆಗಳನ್ನೊಳಗೊಂಡ ಅದ್ಭುತ ಕಥೆ ಎಂದು ತಿಳಿಸಿದ್ದಾರೆ. ಅಲ್ಲದೇ, ಓರ್ವ ನಿರ್ದೇಶಕನಾಗಿ ಭಾಷೆಯ ಅಡೆತಡೆಗಳನ್ನು ಮೀರುವಂತೆ ಕಥೆಯನ್ನು ನಿರೂಪಿಸಿಸುವುದು ನನ್ನ ಗುರಿ ಎಂದು ತಿಳಿಸಿದ್ದರು.