ಕನ್ನಡ ಚಿತ್ರರಂಗದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ಇಂಡಿಯನ್ ಮೈಕಲ್ ಜಾಕ್ಸನ್ ಅಂತಾ ಕರೆಯಿಸಿಕೊಂಡಿರುವ ಪ್ರಭುದೇವ ಒಟ್ಟಿಗೆ ಬೊಂಬಾಟ್ ಡ್ಯಾನ್ಸ್ ಮಾಡಿರುವ ಚಿತ್ರ ಲಕ್ಕಿಮ್ಯಾನ್. ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ, ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರ ಮಾಡಿದ್ದು, ಒಬ್ಬ ದೇವರ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ತಮಿಳುನಟ ಪ್ರಭುದೇವ ಕೂಡ ನಟಿಸಿದ್ದು, ಹಾಡೊಂದರಲ್ಲಿ ಇವರಿಬ್ಬರೂ ಸಖತ್ ಸ್ಟೆಪ್ ಹಾಕಿದ್ದಾರೆ.
ನಾನಾ ನೀನಾ ಎನ್ನುವ ಹಾಗೆ ಇಬ್ಬರೂ ಸೇರಿ ಸಿಗ್ನೇಚರ್ ಸ್ಟೆಪ್ಸ್ ಹಾಕಿ ಭರ್ಜರಿ ಡ್ಯಾನ್ಸ್ ಮಾಡಿರುವ ಈ ಹಾಡು ಈಗಾಗಲೇ ಎಲ್ಲೆಡೆ ವೈರಲ್ ಆಗಿದೆ. ಜಾನಿ ಮಾಸ್ಟರ್ ಅವರ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡನ್ನು ಬೆಂಗಳೂರಿನಲ್ಲೇ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ.
ಇದೇ ಮೊದಲ ಬಾರಿಗೆ ಪುನೀತ್ ರಾಜ್ಕುಮಾರ್ ಹಾಗೂ ಪ್ರಭುದೇವ್ ಅವರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರಲ್ಲದೆ, ಅದ್ಭುತವಾದ ಹಾಡೊಂದರಲ್ಲಿ ಸಖತ್ ಸ್ಟೆಪ್ಸ್ ಹಾಕಿರುವ ಸಣ್ಣ ತುಣುಕಿನ ಮೇಕಿಂಗ್ ವಿಡಿಯೋವನ್ನ ರಿವೀಲ್ ಮಾಡಿದೆ. ಇನ್ನು ಈ ಚಿತ್ರವನ್ನು ಮೊದಲಬಾರಿಗೆ ಪ್ರಭುದೇವಾ ಸಹೋದರ ನಾಗೇಂದ್ರಪ್ರಸಾದ್ ಅವರು ನಿರ್ದೇಶಿಸಿದ್ದಾರೆ.