ದಿಯಾ ಸಿನಿಮಾ ಯಶಸ್ಸಿನ ಬಳಿಕ ನಟ ಪೃಥ್ವಿ ಅಂಬರ್ ಸ್ಯಾಂಡಲ್ವುಡ್ನಲ್ಲಿ ತನ್ನದೇ ಬೇಡಿಕೆಯನ್ನು ಹೊಂದಿದ್ದಾರೆ. ಇದೀಗ ಅಬ ಜಬ ದಬ ಅಂತಾ ಕ್ಯಾಚೀ ಟೈಟಲ್ ಹೊಂದಿರುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡ್ ಗೊತ್ತಿಲ್ಲ ಎಂಬ ಚಿತ್ರವನ್ನು ನಿರ್ದೇಶನ ಮಾಡಿ ಗಮನ ಸೆಳೆದಿದ್ದ ನಿರ್ದೇಶಕ ಮಯೂರ ರಾಘವೇಂದ್ರ ಅಬ ಜಬ ದಬ ಚಿತ್ರದ ಸೂತ್ರಧಾರ.
ಈ ಚಿತ್ರದ ಬಗ್ಗೆ ನಿರ್ದೇಶಕ ಮಯೂರ ರಾಘವೇಂದ್ರ, ನಟ ಪೃಥ್ವಿ ಅಂಬರ್, ನಾಯಕಿ ಅಂಕಿತ ಅಮರ್ ಹಾಗೂ ನಿರ್ಮಾಪಕ ಅನಂತ ಕೃಷ್ಣ, ಛಾಯಾಗ್ರಾಹಕ ಗಿರಿಧರ್ ಸೇರಿದಂತೆ ಇಡೀ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಮೊದಲು ಮಾತು ಶುರು ಮಾಡಿದ ನಿರ್ದೇಶಕ ಮಯೂರ ರಾಘವೇಂದ್ರ, ಕನ್ನಡ್ ಗೊತ್ತಿಲ್ಲ ಚಿತ್ರದ ನಂತರ ನಾನು ರಚಿತಾ ರಾಮ್ ಅವರಿಗೊಂದು ಸಿನಿಮಾ ಮಾಡಬೇಕಿತ್ತು. ಅದು ದೊಡ್ಡ ಬಜೆಟ್ನ ಚಿತ್ರವಾಗಿರುವುದರಿಂದ ಸ್ವಲ್ಪ ತಡವಾಯಿತು. ಅಷ್ಟರಲ್ಲಿ ಈ ಔಟ್ ಅಂಡ್ ಔಟ್ ಕಾಮಿಡಿಯಿರುವ ಚಿತ್ರದ ಕಥೆ ಸಿದ್ಧವಾಯಿತು. ಕಥೆಗೆ ಒಳ್ಳೆಯ ಟೈಟಲ್ ಬೇಕಿತ್ತು. ಮನೆಯಲ್ಲಿ ನನ್ನ ಅಣ್ಣ, ಅವಳ ಮಗಳಿಗೆ ಅದೇನು ಹೇಳುತ್ತಾಳೋ, ಗೊತ್ತೆ ಆಗಲ್ಲ "ಅಬ ಜಬ ದಬ" ಅಂತಾಳೆ ಎಂದ. ನಾನು ತಕ್ಷಣ ಈ ಶೀರ್ಷಿಕೆ ಚೆನ್ನಾಗಿದೆ ಅಂತ ಅದನ್ನೇ ಇಟ್ಟಿದ್ದೇನೆ.
ಆನಂತರ ಸ್ನೇಹಿತ ಅನಂತ ಕೃಷ್ಣ ನಿರ್ಮಾಣಕ್ಕೆ ಮುಂದಾದರು. ಪೃಥ್ವಿ ಅಂಬರ್, ಅಂಕಿತ ಅಮರ್ ಅವರು ನಾಯಕ - ನಾಯಕಿಯಾಗಿ ನಿಗದಿಯಾದರು. ಅಚ್ಯುತಕುಮಾರ್ ಕುಮಾರ್, ಸುಧಾರಾಣಿ, ಹಿರಿಯ ನಟಿ ಊರ್ವಶಿ, ಬಾಬು ಹಿರಣ್ಣಯ್ಯ, ಸಂಗೀತಾ ಭಟ್ ನಮ್ಮ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದರು. ಗಿರಿಧರ್ ದಿವಾನ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಸಮೀರ್ ಸಿಂಹ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ಲರ ಸಹಕಾರದಿಂದ "ಅಬ ಜಬ ದಬ" ಒಳ್ಳೆಯ ಚಿತ್ರವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.