ಬ್ಯೂಟಿಫುಲ್ ತಾರೆ ಪ್ರಿಯಾಂಕಾ ಚೋಪ್ರಾ ಸಾಲು ಸಾಲು ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿ ಚಿತ್ರರಂಗದಿಂದ ದೂರವೇ ಉಳಿದಿರುವ ನಟಿ ಸದ್ಯ ಹಾಲಿವುಡ್ ಸಿನಿಮಾಗಳನ್ನೇ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಿಯಾಂಕಾ ನಟನೆಯ ಸಿಟಾಡೆಲ್ ವೆಬ್ಸೀರಿಸ್ ಅಮೆಜಾನ್ನಲ್ಲಿ ಬಿಡುಗಡೆಯಾಗಿದೆ. ಈ ಸರಣಿಯು ಉತ್ತಮ ಪ್ರತಿಕ್ರಿಯೆಯನ್ನು ಗಳಿಸಿದೆ. ಇದೀಗ ನಟಿ ಜೇಮ್ಸ್ ಸಿ ಸ್ಟ್ರೌಸ್ ಅವರ ರೊಮ್ಯಾಂಟಿಕ್ ಸಿನಿಮಾ 'ಲವ್ ಅಗೇನ್' ವಿಚಾರವಾಗಿ ಬ್ಯುಸಿಯಾಗಿದ್ದಾರೆ. ಸಿನಿಮಾ ಪ್ರಚಾರ ಕಾರ್ಯವನ್ನು ಜೋರಾಗಿಯೇ ಮಾಡುತ್ತಿದ್ದಾರೆ.
ಈ ಚಿತ್ರದ ಪ್ರೀಮಿಯರ್ ಶೋ ಬುಧವಾರ ನಡೆಯಿತು. ನ್ಯೂಯಾರ್ಕ್ನಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದರು. ಈವೆಂಟ್ಗೆ ದೇಸಿ ಗರ್ಲ್ ತಮ್ಮ ಪತಿಯ ಕೈ ಹಿಡಿದುಕೊಂಡು ಆಗಮಿಸಿದ್ದರು. ಈ ವಿಶೇಷ ದಿನಕ್ಕಾಗಿ ಪ್ರಿಯಾಂಕಾ ಬ್ಲಶ್ ನೀಲಿ ಬಣ್ಣದ ಗೌನ್ ಆರಿಸಿಕೊಂಡಿದ್ದರು. ನಿಕ್ ಬೂದು ಬಣ್ಣದ ಸೂಟ್ ಧರಿಸಿದ್ದರು. ನಟ ಸ್ಯಾಮ್ ಹ್ಯೂಘನ್ ಅವರು ಕಪ್ಪು ಬಣ್ಣದ ಸೂಟ್ನಲ್ಲಿ ಸುಂದರವಾಗಿ ಕಾಣುತ್ತಿದ್ದರು.
ಇದನ್ನೂ ಓದಿ:ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ: ವಿದೇಶಕ್ಕೆ ತೆರಳಲು ಶೀಜಾನ್ ಖಾನ್ಗೆ ಕೋರ್ಟ್ ಅನುಮತಿ
ಕಾರ್ಯಕ್ರಮದ ವೇಳೆ ಸ್ಯಾಮ್ ಮತ್ತು ಪ್ರಿಯಾಂಕಾ ಕಿಸ್ ಮಾಡುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಖತ್ ವೈರಲ್ ಆಗಿದೆ. ಪತಿ ನಿಕ್ ಎದುರೇ ಸಹನಟನಿಗೆ ಮುತ್ತು ಕೊಟ್ಟಿರುವುದು ಸದ್ಯ ಸುದ್ದಿಯಾಗಿದೆ. ಇನ್ನು ಲವ್ ಎಗೇನ್ ಸಿನಿಮಾ ವಿಚಾರವಾಗಿ ಹೇಳುವುದಾದರೆ, ತನ್ನ ಸಂಗಾತಿಯನ್ನು ಕಳೆದುಕೊಂಡ ನಂತರ ಪ್ರೀತಿಗೆ ಮತ್ತೊಂದು ಅವಕಾಶ ನೀಡುವ ಕುರಿತ ಚಿತ್ರ ಇದಾಗಿದೆ. ಪ್ರಿಯಾಂಕಾ ಅವರ ಪತಿ, ಅಮೆರಿಕನ್ ಗಾಯಕ ನಿಕ್ ಜೋನಾಸ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕಾ ಜೊತೆ ನಾಯಕನಾಗಿ ಸ್ಯಾಮ್ ಹ್ಯೂಘನ್ ಅಭಿನಯಿಸುತ್ತಿದ್ದಾರೆ. ಇದೇ ಮೇ 5 (ಶುಕ್ರವಾರ) ಬಿಡುಗಡೆಯಾಗಲಿದೆ.
ಸದ್ಯ ಎಜಿಬಿಒ ಸ್ಪೈ ಸೀರಿಸ್ 'ಸಿಟಾಡೆಲ್' ವಿಚಾರವಾಗಿ ನಟಿ ಪ್ರಿಯಾಂಕಾ ಚೋಪ್ರಾ ಸುದ್ದಿಯಲ್ಲಿದ್ದಾರೆ. ಹಾಲಿವುಡ್ನಲ್ಲಿ ಬ್ಯುಸಿಯಾಗಿರುವ ಚೋಪ್ರಾ ಶೀಘ್ರದಲ್ಲೇ ಫರ್ಹಾನ್ ಅಖ್ತರ್ ನಿರ್ದೇಶನದ 'ಜೀ ಲೆ ಝರಾ'ದಲ್ಲಿ ಕೆಲಸ ಮಾಡಲಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಕೂಡ ಪ್ರಮುಖ ಪಾತ್ರ ವಹಿಸಲಿದ್ದಾರೆ. ಚೊಚ್ಚಲ ವೆಬ್ ಸೀರಿಸ್ ಪ್ರಚಾರಕ್ಕೂ ಮುನ್ನ ಪ್ರಿಯಾಂಕಾ ಅವರು ಮತ್ತೊಂದು ಹಾಲಿವುಡ್ ಪ್ರಾಜೆಕ್ಟ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಜಾನ್ ಸೆನಾ ಮತ್ತು ಇದ್ರಿಸ್ ಎಲ್ಬಾ ಅವರೊಂದಿಗೆ 'ಹೆಡ್ಸ್ ಆಫ್ ಸ್ಟೇಟ್'ನಲ್ಲಿ ಸ್ಕ್ರೀನ್ ಶೇರ್ ಮಾಡಲಿದ್ದಾರೆ.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ 2018ರ ಡಿಸೆಂಬರ್ 1 ಮತ್ತು 2 ರಂದು ಜೋಧ್ಪುರದ ಉಮೈದ್ ಭವನ್ ಅರಮನೆಯಲ್ಲಿ ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯದಂತೆ ವಿವಾಹವಾದರು. 2022 ರ ಜನವರಿ ತಿಂಗಳಲ್ಲಿ ಈ ಜೋಡಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗು ಮಾಲ್ತಿ ಮೇರಿ ಜೋನಾಸ್ಳನ್ನು ಸ್ವಾಗತಿಸಿದರು.
ಇದನ್ನೂ ಓದಿ:ಅನುಪಮ್ ಖೇರ್ 537ನೇ ಚಿತ್ರಕ್ಕೆ ಟೈಟಲ್ ಫಿಕ್ಸ್; ಕಾರ್ಟೂನ್ ಪೋಸ್ಟರ್ ಔಟ್