'ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ' ಎಂಬ ಟ್ಯಾಗ್ಲೈನ್ ಹೊಂದಿರುವ 'ಪ್ರಜಾರಾಜ್ಯ' ಚಿತ್ರ ಗಾಂಧಿನಗರದಲ್ಲಿ ಸೌಂಡ್ ಮಾಡುತ್ತಿದೆ. ಇದು ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ ಅನ್ನೋದು ಚಿತ್ರತಂಡದ ಮಾತು. ಪ್ರಜೆಗಳು ಮನಸ್ಸು ಮಾಡಿದ್ರೆ ಏನೆಲ್ಲಾ ಬದಲಾವಣೆ ಮಾಡಬಹುದು ಎಂಬ ಕಥೆಯನ್ನು ಈ ಸಿನಿಮಾ ಹೊಂದಿದೆ. ಗಣರಾಜ್ಯೋತ್ಸವ ಸಂಭ್ರಮದ ನಡುವೆಯೇ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು ಕುತೂಹಲ ಹುಟ್ಟಿಸಿದೆ.
ಆರ್ಥಿಕವಾಗಿ ಸ್ವಾತಂತ್ರ್ಯ: ಪ್ರಜಾರಾಜ್ಯ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ವೃತ್ತಿಯಲ್ಲಿ ವೈದ್ಯರಾಗಿರುವ ನಿರ್ಮಾಪಕ ವರದರಾಜು ಮಾತನಾಡಿ, "ಉಪೇಂದ್ರ ಸಿನಿಮಾ ನೋಡಿ ನಿಜ ಸಂಗತಿಯನ್ನು ಹೀಗೂ ತೋರಿಸಬಹುದು ಎಂದು ಗೊತ್ತಾಯ್ತು. ನಮಗೆ ಹೋರಾಟದ ಮೂಲಕ ಸ್ವಾತಂತ್ರ್ಯ ಬಂತು. ಸ್ವಾತಂತ್ರ್ಯ ಬಂದು 75 ವರ್ಷವಾದರೂ ನಾವೆಲ್ಲಾ ಆರ್ಥಿಕವಾಗಿ ಸ್ವಾತಂತ್ರ್ಯವಾಗಿದ್ದೇವಾ? ನಾವು ಸ್ವಾತಂತ್ರ್ಯವನ್ನು ಹೇಗೆ ನಡೆಸಿಕೊಂಡು ಹೋಗಬೇಕು ಎಂಬುದನ್ನು ತಿಳಿಸಲು ಈ ಸಿನಿಮಾ ಮಾಡಲಾಗಿದೆ" ಎಂದರು.
ಪ್ರತಿಯೊಬ್ಬರೂ ನೋಡುವ ಸಿನಿಮಾ: "ಪ್ರಜಾಪ್ರಭುತ್ವ ಎಂದರೆ ಜನರಿಂದ ಜನರಿಗಾಗಿ ಇರುವ ಸರ್ಕಾರ. ಆದರೆ ಇಂದು ಕೆಲವರಿಂದ ಕೆಲವರಿಗಾಗಿ ಇದೆ. ಸಂವಿಧಾನದ ನಾಲ್ಕನೇ ಅಂಗ ಮಾಧ್ಯಮ ಎಂದು ಹೇಳುತ್ತೇವೆ. ಅದು ತನ್ನ ಕೆಲಸ ಮಾಡುತ್ತಿದೆಯಾ? ಸರಿಯಾಗಿ ಕೆಲಸ ಮಾಡಿದ್ರೆ ಏನೆಲ್ಲಾ ಮಾಡಬಹುದು ಎಂಬುದನ್ನು ಈ ಸಿನಿಮಾ ತಿಳಿಸಲಿದೆ. ಜೊತೆಗೆ, ನಾವಿಂದು ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಬೇಕು. ನಾವು ಕಟ್ಟುವ ಟ್ಯಾಕ್ಸ್ ಸರಿಯಾಗಿ ಬಳಕೆಯಾದರೆ, ನಾವೆಲ್ಲರೂ ಆರ್ಥಿಕವಾಗಿ ಸ್ವಾತಂತ್ರ್ಯರಾಗುತ್ತೇವೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಪ್ರಜೆಗಳಿಗೆ ತಿಳುವಳಿಕೆ ಸಿಗಲಿದೆ. ಪ್ರತಿಯೊಬ್ಬ ಪ್ರಜೆಯೂ ನೋಡಲೇಬೇಕಿರುವ ಸಿನಿಮಾ ಇದು. ಪ್ರತೀ ಮತದಾರರು ನೋಡಿದ್ರೆ ಬದಲಾವಣೆ ಖಂಡಿತ" ಎಂದು ಅವರು ಹೇಳಿದರು.
ಒಳ್ಳೆ ಸಂದೇಶ ನೀಡುವ ಚಿತ್ರ:ಕಾರ್ಯಕ್ರಮಕ್ಕೆ ಆಗಮಿಸಿದ್ದ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಮಾತನಾಡಿ, "ನಾನು ಈ ಚಿತ್ರದಲ್ಲಿ ನಟಸಿದ್ದೇನೆ. ಇಂದಿನ ಸಮಾಜದ ಆಗುಹೋಗುಗಳನ್ನು ಹೇಳುವ ಸಿನಿಮಾ ಇದು. ನಮ್ಮ ಮತದ ಮಹತ್ವ ತೋರಿಸುವ ಜೊತೆಗೆ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂಬುದನ್ನು ತೋರಿಸಲಾಗಿದೆ. ಇಂದು ಕೆಲಸ ಮಾಡದವ, ಮಾಡುವವ ಎಲ್ಲರೂ ಟ್ಯಾಕ್ಸ್ ಕಟ್ಟುತ್ತಾರೆ. ಆ ಹಣ ಏನಾಯ್ತು ಎಂದು ಕೇಳುವ ಅಧಿಕಾರ ಕೂಡ ಪ್ರಜೆಗಿದೆ. ನಮ್ಮ ಟ್ಯಾಕ್ಸ್ ಸರಿಯಾಗಿ ಬಳಕೆಯಾದ್ರೆ ದೇಶದ ಎಲ್ಲಾ ಜನರಿಗೆ ಉಚಿತ ಶಿಕ್ಷಣ, ಆರೋಗ್ಯ ನೀಡಬಹುದು. ಇವೆರಡಕ್ಕಾಗಿ ಮನುಷ್ಯ ಜೀವನವಿಡೀ ದುಡಿಯುತ್ತಾನೆ. ಇಂತಹ ಸಮಾಜಕ್ಕೆ ಒಳ್ಳೆ ಸಂದೇಶ ನೀಡುವ ಸಿನಿಮಾ ಗೆಲ್ಲಬೇಕೆಂದರು".