ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ಪ್ರಜಾಪ್ರಭುತ್ವದ ಮಹತ್ವ ಸಾರಲಿರುವ " ಪ್ರಜಾರಾಜ್ಯ" ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಇಂದು ಪ್ರಜಾರಾಜ್ಯ ಟೀಸರ್ ರಿಲೀಸ್ ಮಾಡಿದ ನಟ ದೇವರಾಜ್ ಈ ಚಿತ್ರದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಜಾರಾಜ್ಯ ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ಅವರು, ಈ ಚಿತ್ರದಲ್ಲಿ ರಾಜಕೀಯ ಮುಖಂಡನ ಪಾತ್ರ ಮಾಡಿದ್ದೇನೆ. ಈಗಿನ ರಾಜಕೀಯದ ಲೋಪ ದೋಷಗಳನ್ನು ತೋರಿಸಿ, ಅದಕ್ಕೆ ಪರಿಹಾರ ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ. ಟೀಸರ್ ಚೆನ್ನಾಗಿದೆ. ಈ ಚಿತ್ರದ ನಿರ್ಮಾಪಕರಾದ ವರದರಾಜು ಅವರು ವೈದ್ಯರಾಗಿದ್ದು, ಸಾಮಾಜಿಕ ಕಾಳಜಿಯಿರುವ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಇನ್ನು ಪ್ರಜಾರಾಜ್ಯ ಚಿತ್ರದಲ್ಲಿ ಅಭಿನಯಿಸುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ ವಿಜಯ್ ಭಾರ್ಗವ. ರೈತನಾಗಿ ಕಾಣಿಸಿಕೊಂಡಿರುವ ವಿಜಯ್ ಭಾರ್ಗವ ಜೋಡಿಯಾಗಿ ದಿವ್ಯ ಅಭಿನಯಿಸಿದ್ದಾರೆ. ಇದರ ಜೊತೆಗೆ ಮೀಸೆ ಪ್ರಕಾಶ್, ಎಸ್ಕಾರ್ಟ್ ಶ್ರೀನಿವಾಸ್, ಚಿಕ್ಕ ಹೆಜ್ಜಾಜಿ ಮಹದೇವ್, ಅಮೂಲ್ಯ ಸೇರಿದಂತೆ ಮುಂತಾದವರು ಕೂಡಾ ನಟಿಸಿದ್ದಾರೆ.
ನಿರ್ಮಾಪಕ ಡಾ. ವರದರಾಜು ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದೆ. ನಮ್ಮ ಅಜ್ಜಂದಿರ ಕಾಲದಲ್ಲಿ ಸ್ವಾತಂತ್ರ್ಯ ಬಂದ ರಜತ ಮಹೋತ್ಸವ ಆಚರಿಸಿದರು. ನಮ್ಮ ತಂದೆಯ ಕಾಲದವರು ಸುವರ್ಣ ಮಹೋತ್ಸವ ಆಚರಣೆ ಮಾಡಿದರು. ನಾವು ಈಗ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ.