ಜಗತ್ತೇ ಒಂದು ಮನೆ, ನಾವೆಲ್ಲ ಒಂದೇ ಸೂರಿನಡಿ ಬದುಕುತ್ತಿರುವವರು ಎನ್ನುವ ಭಾವೈಕ್ಯತೆಯ ಸಂದೇಶವನ್ನು ಹೊತ್ತು ತಂದಿದ್ದ ತೋತಾಪುರಿ ಸಿನಿಮಾ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದು ಯಶಸ್ವಿಯಾಗಿತ್ತು. ಇದರ ಸೀಕ್ವೆಲ್ - ತೋತಾಪುರಿ 2 ಸಿನಿಮಾ ಇದೇ ಸೆ. 28ರಂದು ರಾಜ್ಯಾದ್ಯಂತ ಬಿಡುಗಡೆ ಆಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.
ಚಿತ್ರದಲ್ಲಿ ಒಂದು ಅದ್ಭುತ ಸಂದೇಶವಿದೆ. ಜಾತಿ-ಧರ್ಮಕ್ಕೂ ಹೆಚ್ಚಾಗಿ ಮನುಷ್ಯ ಸಂಬಂಧವೇ ಬಹಳ ಮುಖ್ಯ ಎಂದು ಹೇಳಲಾಗಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಇರಬೇಕು ಎಂಬ ಸಂದೇಶವಿದೆ. ಒಂದು ಸನ್ನಿವೇಶದಲ್ಲಿ ಕೆಳವರ್ಗದ ನಂಜಮ್ಮನನ್ನ ದೇವಸ್ಥಾನದ ಒಳಗೆ ಬಿಡಲು ಮೇಲು ವರ್ಗದವರು ವಿರೋಧ ವ್ಯಕ್ತಪಡಿಸುತ್ತಾರೆ. ಆಗ ಜಗ್ಗೇಶ್ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಮೆ ಮುಂದೆ ನಿಂತು ಸಾಯಬ್ರೇ ಸಂವಿಧಾನವನ್ನು ಬಹಳ ಹೆಮ್ಮೆಯಿಂದ ಬರೆದಿದ್ದೀರ. ಆಗ ಜಾತಿ ಅಂದ್ರೆ ಗಂಡು ಹೆಣ್ಣು ಅಷ್ಟೇ ಅಂತ ಬರೆದಿದ್ದರೆ, ಇತಿಹಾಸ ಸೃಷ್ಟಿ ಮಾಡುಬಹುದಿತ್ತು ಅಲ್ವಾ ಅಂತಾ ಜಗ್ಗೇಶ್ ಅವರು ಅಂಬೇಡ್ಕರ್ ಪ್ರತಿಮೆ ಬಳಿ ಪ್ರಶ್ನೆ ಕೇಳುತ್ತಾರೆ. ಈ ಒಂದು ಸನ್ನಿವೇಶ ನೋಡುಗರನ್ನು ಭಾವುಕರನ್ನಾಗಿಸಿದೆ.
ಚಿತ್ರದಲ್ಲಿ ಈರೇಗೌಡನಾಗಿ ಜಗ್ಗೇಶ್ ಕಾಣಿಸಿಕೊಂಡಿದ್ದಾರೆ. ಮುಸ್ಲಿಂ ಹುಡುಗಿ ಶಕೀಲ ಬಾನು ಪಾತ್ರದಲ್ಲಿ ಅದಿತಿ ಪ್ರಭುದೇವ ಗಮನ ಸೆಳೆಯುತ್ತಾರೆ. ಚಿತ್ರದ ಕೊನೆಗೆ ನಾರಾಯಣ್ ಪಿಳ್ಳೈ ಎಂಬ ಪಾತ್ರದಲ್ಲಿ ಧನಂಜಯ್ ಆಗಮನವಾಗುತ್ತೆ. ನಾರಾಯಣ್ ಪಿಳ್ಳೈ ಮತ್ತು ವಿಕ್ಟೋರಿಯಾ ಪಾತ್ರಧಾರಿ ಸುಮನ್ ರಂಗನಾಥ್ ಅವರ ಪ್ರೇಮಕಥೆಯೂ ಸಿನಿಮಾದಲ್ಲಿ ಇದೆ. ಜಾತಿ ಸಂಘರ್ಷಗಳ ಮಧ್ಯೆ ಈರೇಗೌಡ ಮತ್ತು ಶಕೀಲ ಬಾನು ಒಂದಾಗುವ ಮೂಲಕ ಜೋಡಿಯ ಪ್ರೇಮಕಥೆ ಸುಖಾಂತ್ಯವಾಗುತ್ತದೆ. ನಾನು, ನನ್ನದು ಅಂತ ಹೇಳುವ ಸಮಾಜದಲ್ಲಿ ತೋತಾಪುರಿ 2 ಚಿತ್ರ ಹಾಸ್ಯದ ಮೂಲಕ ಜನರ ಪರಿವರ್ತನೆಗೆ ಕಾರಣವಾಗಿದೆ ಎಂಬುದು ಸಿನಿಮಾ ವೀಕ್ಷಿಸಿದರವರ ಪೈಕಿ ಹಲವರ ಅಭಿಪ್ರಾಯ.