ಪೊನ್ನಿಯಿನ್ ಸೆಲ್ವನ್ 2 ಕಳೆದ ಶುಕ್ರವಾರ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಕಲೆಕ್ಷನ್ ವಿಚಾರದಲ್ಲೂ ಉತ್ತಮ ಫಲಿತಾಂಶ ಪಡೆದುಕೊಂಡಿದೆ. ಆದ್ರೆ ಅತ್ಯಂತ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿದ ಪೊನ್ನಿಯಿನ್ ಸೆಲ್ವನ್‌ನ (ಭಾಗ 1) ಮುಂದುವರಿದ ಭಾಗ ಹಿಂದಿನ ಯಶಸ್ಸನ್ನು ಪುನರಾವರ್ತಿಸಲು ಸಾಧ್ಯವಾಗುತ್ತಿಲ್ಲ.
ಕಳೆದ ವರ್ಷ ತೆರೆಕಂಡ ಪೊನ್ನಿಯಿನ್ ಸೆಲ್ವನ್ 1 ಗಲ್ಲಾಪೆಟ್ಟಿಗೆಯಲ್ಲಿ ಹಲವು ದಾಖಲೆಗಳನ್ನು ಪುಡಿಮಾಡಿತು. ಜಾಗತಿಕವಾಗಿ 500 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿತು. ಆದಾಗ್ಯೂ, ಪೊನ್ನಿಯಿನ್ ಸೆಲ್ವನ್ 2 ಅದೇ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಬಾಕ್ಸ್ ಆಫೀಸ್ ಸಂಖ್ಯೆ ಇಳಿಮುಖವಾಗುತ್ತಿದೆ.
ಸಿನಿಮಾ ವ್ಯವಹಾರ ವಿಮರ್ಷಕ ಸ್ಯಾಕ್ನಿಲ್ಕ್ ಪ್ರಕಾರ, ಪೊನ್ನಿಯಿನ್ ಸೆಲ್ವನ್ 2 ಭಾರತದಲ್ಲಿ ಬುಧವಾರ 8 ಕೋಟಿ ರೂ. ಗಳಿಸಿದೆ. ಚಿತ್ರ ತೆರೆ ಕಂಡ ನಂತರ ಇದೇ ಮೊದಲ ಬಾರಿಗೆ ಒಂದೇ ಅಂಕಿಯ ಮೊತ್ತ ಗಳಿಸಿದೆ. ಆದಾಗ್ಯೂ, ಸತತವಾಗಿ ಐದು ದಿನಗಳವರೆಗೆ ಎರಡಂಕಿಯ ಸಂಖ್ಯೆಯನ್ನು ಹೊತ್ತು ತಂದಿರುವ ಚಲನಚಿತ್ರವು ಎರಡನೇ ವಾರಾಂತ್ಯ ವೇಗವನ್ನು ಪಡೆಯುವ ನಿರೀಕ್ಷೆ ಇದೆ. ಸದ್ಯ ವಾರದ ದಿನ ಹಿನ್ನೆಲೆ ಕಲೆಕ್ಷನ್ ಕೊಂಚ ಕುಂಠಿತವಾಗಿದೆ. ಶನಿವಾರ ಮತ್ತು ಭಾನುವಾರದ ಕಲೆಕ್ಷನ್ ಸಂಖ್ಯೆ ಏರುವ ನಿರೀಕ್ಷೆ ಇದೆ. ಈ ಚಿತ್ರವು ಪ್ರಸ್ತುತ ಭಾರತದಲ್ಲಿ 122.25 ಕೋಟಿ ರೂಪಾಯಿಗಳನ್ನು ಗಳಿಸಿದೆ ಮತ್ತು ಜಾಗತಿಕವಾಗಿ 250 ಕೋಟಿ ರೂಪಾಯಿಗಳನ್ನು ಗಳಿಸುವ ಸಮೀಪದಲ್ಲಿದೆ.
ತಮಿಳಿನಲ್ಲಿ 26.67%, ಮಲಯಾಳಂನಲ್ಲಿ 14.63%, ತೆಲುಗಿನಲ್ಲಿ 12.59% ಮತ್ತು ಹಿಂದಿಯಲ್ಲಿ 7.91% ರಷ್ಟು ಆಕ್ಯುಪೆನ್ಸಿ ದರ ಇದೆ. ಸಿನಿಮಾ ನಿರ್ಮಾಣ ಕಂಪನಿಯಾದ ಮದ್ರಾಸ್ ಟಾಕೀಸ್‌ನ ಟ್ವೀಟ್ ಪ್ರಕಾರ, ಚಿತ್ರವು ವಿದೇಶದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ, 3.5 ಮಿಲಿಯನ್ ಡಾಲರ್‌ಗೂ ಹೆಚ್ಚು ಹಣ ಗಳಿಸಿದೆ. ಯುಎಸ್ ವಾರಾಂತ್ಯದ ಗಲ್ಲಾಪೆಟ್ಟಿಗೆ ಕಲೆಕ್ಷನ್ ವಿಚಾರದಲ್ಲಿ ಚಿತ್ರವು 8ನೇ ಸ್ಥಾನದಲ್ಲಿದೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.