ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದ ಪಠಾಣ್ ಸಿನಿಮಾ ಹೊಸ ಹೊಸ ದಾಖಲೆಗಳೊಂದಿಗೆ ಮುನ್ನುಗ್ಗುತ್ತಿದೆ. ವಿವಾದಗಳ ಸುಳಿಯಲ್ಲಿ ಸಿಲುಕಿ ಜನವರಿ 25ರಂದು ಬಿಡುಗಡೆಯಾದ ಸಿನಿಮಾ 15 ದಿನಗಳಲ್ಲಿ 877 ಕೋಟಿ ರೂಪಾಯಿ ಸಂಪಾದಿಸಿದೆ. ಬಾಲಿವುಡ್ ಕಿಂಗ್ ಖಾನ್ ಆ್ಯಕ್ಷನ್ ಅವತಾರದಲ್ಲಿ ಅಬ್ಬರಿಸಿದ್ದು, ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಇದೀಗ 'ಪಠಾಣ್' ಹೆಸರು ಉಲ್ಲೇಖಿಸದೇ ಪ್ರಧಾನಿ ನರೇಂದ್ರ ಮೋದಿ ಅವರು ಸಿನಿಮಾ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಪ್ರಧಾನಿ ಮೋದಿ ಹೇಳಿದ್ದೇನು?:ನಿನ್ನೆ ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಮಾತನಾಡುವಾಗ ಜಮ್ಮು ಕಾಶ್ಮೀರದಲ್ಲಾಗುತ್ತಿರುವ ಬದಲಾವಣೆ, ಅಭಿವೃದ್ಧಿಯನ್ನು ಉಲ್ಲೇಖಿಸಿದ್ದರು. ಶ್ರೀನಗರದಲ್ಲಿ ದಶಕಗಳ ನಂತರ ಥಿಯೇಟರ್‌ಗಳು ಹೌಸ್ಫುಲ್ ಆಗುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಬೇಶರಂ ಹಾಡಿಗೆ ವಿರೋಧ: ಪಠಾಣ್ ಚಿತ್ರದ ಬೇಶರಂ ಹಾಡು ಕಳೆದ ಡಿಸೆಂಬರ್ ಎರಡನೇ ವಾರದಲ್ಲಿ ರಿಲೀಸ್ ಆಗಿತ್ತು. ನಟಿ ದೀಪಿಕಾ ಪಡುಕೋಣೆ ಅವರ ವಸ್ತ್ರದ ವಿಚಾರವಾಗಿ ಭಾರಿ ಟೀಕೆ ವ್ಯಕ್ತವಾಗಿತ್ತು. ನಟಿ ಧರಿಸಿದ್ದ ಕೇಸರಿ ಬಣ್ಣದ ಬಿಕಿನಿ ವಿರುದ್ಧ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಹಲವೆಡೆ ಪ್ರತಿಭಟನೆ ನಡೆದಿತ್ತು. ಸಿನಿಮಾ ಬಹಿಷ್ಕರಿಸುವ ಎಚ್ಚರಿಕೆಯೂ ಇತ್ತು. ನಟಿಯ ವೇಷಭೂಷಣ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಹಲವರು ಆರೋಪಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪಠಾಣ್ ಬಾಯ್ಕಾಟ್ ಅಭಿಯಾನ ಕೂಡ ಆರಂಭವಾಗಿತ್ತು.
ಜನವರಿ 25ರಂದು ಸಿನಿಮಾ ಬಿಡುಗಡೆ ಆಗಿದ್ದು, ಮೊದಲೆರಡು ದಿನಗಳು ಸಹ ಪ್ರತಿಭಟನೆ ನಡೆದವು. ಚಿತ್ರಮಂದಿರಗಳ ಮೇಲೆ ಕಲ್ಲು ತೂರಾಟ ನಡೆಯಿತು. ಆದ್ರೆ ಚಿತ್ರ ನಿರೀಕ್ಷೆ ಮೀರಿ ಯಶಸ್ಸು ಸಾಧಿಸಿದೆ.