ಬಾಲಿವುಡ್ನ ಬಹುನಿರೀಕ್ಷಿತ ಚಿತ್ರ ಪಠಾಣ್ ಬಿಡುಗಡೆಗೆ ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿವೆ. ಚೇತರಿಕೆ ಮಾರ್ಗದಲ್ಲಿರುವ ಬಾಲಿವುಡ್ಗೆ ಪಠಾಣ್ ಸಿನಿಮಾ ಸಿಹಿ ಸುದ್ದಿ ನೀಡುವ ಲಕ್ಷಣಗಳು ಕಾಣುತ್ತಿದೆ. ಹೌದು, ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್, ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ, ಬಹುಬೇಡಿಕೆ ನಟ ಜಾನ್ ಅಬ್ರಹಾಂ ಮುಖ್ಯಭೂಮಿಕೆಯಲ್ಲಿರುವ ಪಠಾಣ್ ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ.
ರಿಲೀಸ್ಗೂ ಮುನ್ನ ಪಠಾಣ್ ದಾಖಲೆ:ಶಾರುಖ್ ಖಾನ್ ಅವರ ಮುಂಬರುವ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಪಠಾಣ್ನ ಮುಂಗಡ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯು ಜನವರಿ 20ರಿಂದ (ನಿನ್ನೆ, ಶುಕ್ರವಾರ) ಆರಂಭಗೊಂಡಿದೆ. ಒಂದೇ ದಿನದಲ್ಲಿ ಪಠಾಣ್ನ ಮುಂಗಡ ಟಿಕೆಟ್ ಮಾರಾಟವು 15 ಕೋಟಿಗೂ ಹೆಚ್ಚು ರೂಪಾಯಿ ಸಂಗ್ರಹ ಮಾಡಿದೆ. ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರದ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಹಾರವನ್ನು ಮೀರಿಸುವ ಸಮೀಪದಲ್ಲಿದೆ.
ಮೊದಲ ದಿನದ ಮುಂಗಡ ಟಿಕೆಟ್ ಬುಕ್ಕಿಂಗ್: ಪಠಾಣ್ ಸಿನಿಮಾದ ಹಾಡು ವಿವಾದಕ್ಕೊಳಗಾದರೂ ಕೂಡ ಚಿತ್ರ ಭರ್ಜರಿ ಯಶಸ್ಸು ಕಾಣುವ ಲಕ್ಷಣಗಳು ಗೋಚರಿಸುತ್ತಿದೆ. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನಾಲ್ಕು ವರ್ಷಗಳ ಬಳಿಕ ಬಿಗ್ ಸ್ಕ್ರೀನ್ಗೆ ಮರಳುತ್ತಿದ್ದು, ಅವರ ಅಭಿಮಾನಿಗಳ ನಿರೀಕ್ಷೆ ಶಿಖರದಷ್ಟಿದೆ. ಮೊದಲ ದಿನದ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಹಿತಿ ಪ್ರಕಾರ 15.18 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಪಠಾಣ್ ತಂಡದ ಉತ್ಸಾಹ ಹೆಚ್ಚಿಸಿದೆ.
ಯಾವ ಭಾಷೆಯ ಸಿನಿಮಾ ಟಿಕೆಟ್ ಹೆಚ್ಚು ಮಾರಾಟ?:ಪಠಾಣ್ ಚಿತ್ರದ ಹಿಂದಿ ಮತ್ತು ತೆಲುಗು ಆವೃತ್ತಿಗಳು ಹೆಚ್ಚಿನ ಸಂಖ್ಯೆಯ ಟಿಕೆಟ್ಗಳನ್ನು ಮಾರಾಟ ಮಾಡಿವೆ. ತಮಿಳು ಸಿನಿಮಾ ಮಾರುಕಟ್ಟೆ ಮೊದಲೆರಡು ಭಾಷೆಗಳಷ್ಟರ ಮಟ್ಟಿಗೆ ಪ್ರತಿಕ್ರಿಯಿಸಿಲ್ಲ. ತಮಿಳು ಆವೃತ್ತಿಯಲ್ಲೂ ಹೆಚ್ಚಿನ ಸಂಖ್ಯೆಯ ಟಿಕೆಟ್ಗಳು ಮಾರಾಟವಾದರೆ ಪಠಾಣ್ ಯಶಸ್ವಿಗೆ ಮಾರ್ಗ ಸರಳವಾಗುತ್ತದೆ. ಪಠಾಣ್ ಸಿನಿಮಾದ ಆರಂಭಿಕ ದಿನದ ವಹಿವಾಟು ಸರಿಸುಮಾರು 40 ಕೋಟಿ ರೂಪಾಯಿ ಆಗಲಿದೆ ಎಂಬ ಊಹಾಪೋಹಗಳು ಎಲ್ಲೆಡೆ ಹರಿದಾಡುತ್ತಿವೆ.