ಬೆಳಗಾವಿ: ಶಾರುಖ್ ಖಾನ್-ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ 'ಪಠಾಣ್' ಚಿತ್ರ ಇಂದು (ಬುಧವಾರ) ತೆರೆಕಂಡಿದ್ದು ಬೆಳಗಾವಿಯಲ್ಲಿ ಆಕ್ರೋಶ ವ್ಯಕ್ತವಾಯಿತು. ನಗರದ ಸ್ವರೂಪ ಮತ್ತು ನರ್ತಕಿ ಚಿತ್ರಮಂದಿರದ ಮೇಲೆ ಬೆಳಗ್ಗೆ ದಾಳಿ ಮಾಡಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಚಿತ್ರದ ಬ್ಯಾನರ್ಗಳನ್ನು ಹರಿದು ಹಾಕಿದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
30 ಮಂದಿ ವಿರುದ್ಧ ದೂರು: ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಕೆಲವು ಹಿಂದೂಪರ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಪೋಸ್ಟರ್ ಹರಿಯಲು ಯತ್ನಿಸಿದ ಹಿನ್ನೆಲೆಯಲ್ಲಿ ಖಡೇಬಜಾರ್ ಠಾಣೆಯಲ್ಲಿ 30 ಹಿಂದೂಪರ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ. ಸದ್ಯ ಚಿತ್ರಮಂದಿರ ಬಳಿ ಉದ್ವಿಗ್ನ ಪರಿಸ್ಥಿತಿ ಇದೆ. ಮುಂಜಾಗ್ರತಾ ಕ್ರಮವಾಗಿ ಓರ್ವ ಸಿಪಿಐ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿದ್ದು, ಕೆಎಸ್‌ಆರ್‌ಪಿ ತುಕಡಿ ಸ್ಥಳದಲ್ಲಿದೆ.
'ಪ್ರದರ್ಶನ ಹಿಂಪಡೆಯಿರಿ':ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿರುವ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್, ವಿತರಕರು ಚಿತ್ರ ಪ್ರದರ್ಶನ ಹಿಂಪಡೆಯುವಂತೆ ಮನವಿ ಮಾಡಿದರು. "ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ವಯಂಪ್ರೇರಿತವಾಗಿ ಚಿತ್ರ ಪ್ರದರ್ಶನ ಹಿಂಪಡೆಯಲಿ. ಈ ರೀತಿ ಚಿತ್ರಗಳ ಪ್ರದರ್ಶನ ಮೂಲಕ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ. ಪ್ರತಿಭಟನೆ ಇವತ್ತು ಪ್ರಾರಂಭವಾಗಿದೆ. ಬಹಳಷ್ಟು ಹೆಣ್ಣುಮಕ್ಕಳು ಸಹ ಚಲನಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಿತರಕರೇ ಚಿತ್ರ ಪ್ರದರ್ಶನದಿಂದ ಹಿಂದೆ ಸರೆಯಬೇಕು" ಎಂದು ಅಭಯ್ ಪಾಟೀಲ್ ಆಗ್ರಹಿಸಿದರು. ಸ್ವರೂಪ ಮತ್ತು ನರ್ತಕಿ ಚಿತ್ರ ಮಂದಿರ ಮುಂದೆ ಪೊಲೀಸರು ಬೀಡುಬಿಟ್ಟಿದ್ದಾರೆ.