ದೇಶದ ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನಾಧಾರಿತ ಚಲನ ಚಿತ್ರ ಸಿದ್ಧವಾಗುತ್ತಿದೆ. ಈ ಚಿತ್ರವನ್ನು ವಿನೋದ್ ಭಾನುಶಾಲಿ ಮತ್ತು ಸಂದೀಪ್ ಸಿಂಗ್ ಒಟ್ಟಾಗಿ ನಿರ್ಮಾಣ ಮಾಡಲಿದ್ದಾರೆ. ಮೈನ್ ರಹೂನ್ ಯಾ ನಾ ರಹೂನ್, ಯೇ ದೇಶ್ ರೆಹನಾ ಚಾಹಿಯೇ - ATAL (Main Rahoon Ya Na Rahoon, Yeh Desh Rehna Chahiye: ATAL) ಚಿತ್ರದ ಟೈಟಲ್. ಅಟಲ್ ಬಿಹಾರಿ ವಾಜಪೇಯಿ ಪಾತ್ರವನ್ನು ನಟ ಪಂಕಜ್ ತ್ರಿಪಾಠಿ ನಿರ್ವಹಿಸಲಿದ್ದಾರೆ ಎಂದು ಚಿತ್ರತಂಡ ಇಂದು ತಿಳಿಸಿದೆ.
ಅಟಲ್ ಬಿಹಾರಿ ವಾಜಪೇಯಿ ಅವರಂತಹ ಅಪ್ರತಿಮ ವ್ಯಕ್ತಿತ್ವದ ಪಾತ್ರವನ್ನು ನಿರ್ವಹಿಸುವುದು ಬಹಳ ಸಂತೋಷಕರ ಮತ್ತು ಗೌರವದ ವಿಷಯ. ಅವರು ಕೇವಲ ರಾಜಕಾರಣಿಯಾಗಿರಲಿಲ್ಲ, ಅತ್ಯುತ್ತಮ ಬರಹಗಾರ ಮತ್ತು ಹೆಸರಾಂತ ಕವಿಯಾಗಿದ್ದರು. ಅವರ ಪಾತ್ರದಲ್ಲಿ ನಟಿಸುವುದು ನನಗೆ ಸಿಕ್ಕಿರುವ ಭಾಗ್ಯ ಎಂದು ನಟ ಪಂಕಜ್ ತ್ರಿಪಾಠಿ ತಿಳಿಸಿದರು.
ಮರಾಠಿ ಚಲನಚಿತ್ರಗಳಾದ ನಟರಂಗ್ ಮತ್ತು ಬಲ್ಗಂಧರ್ವ ಖ್ಯಾತಿಯ ರವಿ ಜಾಧವ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಮೊದಲು ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದು, ಮರಾಠಿ ಚಿತ್ರರಂಗದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಚಿತ್ರ ನಿರ್ದೇಶಿಸಲಿರುವ ಬಗ್ಗೆ ಮಾತನಾಡಿರುವ ಅವರು, ''ಓರ್ವ ನಿರ್ದೇಶಕನಾಗಿ ಅಟಲ್‌ಜಿ ಕಥೆಗಿಂತ ಉತ್ತಮವಾದ ಕಥೆಯನ್ನು ನಾನು ಕೇಳಲು ಸಾಧ್ಯವಿಲ್ಲ. ಪಂಕಜ್ ತ್ರಿಪಾಠಿಯಂತಹ ಆದರ್ಶ ನಟನನ್ನು ನಿರ್ಮಾಪಕರ ಬೆಂಬಲದೊಂದಿಗೆ ತೆರೆ ಮೇಲೆ ಉತ್ತಮವಾಗಿ ತರಲು ಪ್ರಯತ್ನಿಸುತ್ತೇನೆ'' ಎಂದು ತಿಳಿಸಿದರು.