ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ನಿರ್ದೇಶಕ ಸಿಂಪಲ್ ಸುನಿ. ಅವತಾರ ಪುರುಷ ಚಿತ್ರದ ಬಳಿಕ ಸಿಂಪಲ್ ಸುನಿ ದೊಡ್ಮನೆ ಕುಡಿ ವಿನಯ್ ರಾಜ್ಕುಮಾರ್ ಜೊತೆ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಮಾಡುತ್ತಿರೋದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಈ ಚಿತ್ರಕ್ಕೆ 'ಒಂದು ಸರಳ ಪ್ರೇಮಕಥೆ' ಅಂತಾ ಟೈಟಲ್ ಫಿಕ್ಸ್ ಆಗಿದ್ದು, ಸೈಲೆಂಟ್ ಆಗಿ ಚಿತ್ರೀಕರಣ ನಡೆಯುತ್ತಿದೆ.
ಪೋಸ್ಟರ್ ಅನಾವರಣ:ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮೈಸೂರಿನಲ್ಲಿ ಎರಡನೇ ಹಂತದ ಚಿತ್ರೀಕರಣದಲ್ಲಿ ನಿರತವಾಗಿದ್ದು, ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ 'ಒಂದು ಸರಳ ಪ್ರೇಮಕಥೆ' ಚಿತ್ರದ ವಿಶೇಷತೆ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಸ್ವಾತಿಷ್ಠ ಕೃಷ್ಣನ್, ರಾಧಾ ಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಎಂಬ ಇಬ್ಬರು ಚೆಲುವೆಯರ ಜೊತೆ ನಟ ವಿನಯ್ ರಾಜ್ಕುಮಾರ್ ರೊಮ್ಯಾನ್ಸ್ ಮಾಡಲಿದ್ದಾರೆ.
ಈ ಬಗ್ಗೆ ಮಾತನಾಡಿದ ವಿನಯ್, ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ. ನನಗೆ ಮೊದಲಿನಿಂದಲೂ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಬಹಳ ಇಷ್ಟ. ಜೊತೆಗೆ ಸುನಿ ಅವರ ನಿರ್ದೇಶನದ ಶೈಲಿ ಕೂಡ ತುಂಬಾ ಇಷ್ಟ. ಸುನಿ ಅವರು ಈ ಸಿನಿಮಾ ಕಥೆ ಹೇಳಲು ಬಂದಾಗ, ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದೇನೆ ಅನ್ನೋದೇ ತುಂಬಾ ಖುಷಿ ಕೊಟ್ಟಿತ್ತು. ಚಿತ್ರದಲ್ಲಿ ಅತಿಶಯ್ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಸಂಗೀತ ನಿರ್ದೇಶಕನ ಪಾತ್ರ, ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಆಗಬೇಕು ಅನ್ನೋದು ಅವನ ಕನಸು. ಆತನ ಮನಸ್ಸಲ್ಲಿ ಒಂದು ಹುಡುಗಿಯ ಹುಡುಕಾಟ ಯಾವಾಗಲೂ ಇರುತ್ತದೆ. ಇದು ಸಿನಿಮಾದ ಒಂದು ಎಳೆ. ಈ ಚಿತ್ರ ನಿಜವಾಗ್ಲೂ ಯುವಕರಿಗೆ ಇಷ್ಟ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರಕ್ಕೆ ಇಟ್ಟ ಮೊದಲ ಟೈಟಲ್ ಒಂದು ಸರಳ ಪ್ರೇಮಕಥೆ. ಯಾವುದಾದರೂ ಸಿನಿಮಾಗೆ ಈ ಟೈಟಲ್ ಇಡೋಣ ಎಂದು ಹತ್ತು ವರ್ಷಗಳಿಂದ ಟೈಟಲ್ ರಿನಿವಲ್ ಮಾಡಿಕೊಂಡು ಬಂದಿದ್ದೆ. ಈ ಚಿತ್ರದ ಕಥೆ ಕೇಳಿ ವಿನಯ್ ರಾಜ್ ಕುಮಾರ್ ಒಕೆ ಮಾಡಿದ್ರು, ಚಿತ್ರಕ್ಕೆ ಪ್ರಸನ್ನ ಅವರು ಕಥೆ ಬರೆದಿದ್ದಾರೆ. ಜನವರಿ 23ರಂದು ಸಿನಿಮಾ ಮುಹೂರ್ತ ಆಗಿತ್ತು. ಬೆಂಗಳೂರು, ಚಿಕ್ಕಪೇಟೆಯಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಮೈಸೂರಿನಲ್ಲಿ ಇಂದು ಕೊನೆಯ ದಿನದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಶೇಕಡ 50ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದೆ ಎಂದರು.