ಕಬ್ಜ ಮೂಲಕ ಸದ್ದು ಮಾಡುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸುತ್ತಿರುವ ಚಿತ್ರ 'ಹಂಟರ್'. ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆಯುತ್ತಿರುವ ಹಂಟರ್ ಸಿನಿಮಾದ ಚಿತ್ರೀಕರಣ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಭರದಿಂದ ಸಾಗುತ್ತಿದೆ. ಶೂಟಿಂಗ್ನಲ್ಲಿ ಹಿರಿಯ ನಟರಾದ ಶರತ್ ಕುಮಾರ್, ಸಮನ್, ಸಾಧುಕೋಕಿಲ, ನಿರಂಜನ್, ಸೌಮ್ಯ ಮೆನನ್ ಭಾಗವಹಿಸಿದರು.
ಮೊದಲು ಮಾತನಾಡಿದ ನಟ ಶರತ್ ಕುಮಾರ್, ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನನ್ನ ಪಾತ್ರ ಚೆನ್ನಾಗಿದೆ. ಈ ತಂಡದ ಜೊತೆ ಕೆಲಸ ಮಾಡಿದ್ದು ಖುಷಿಯಾಗಿದೆ ಎಂದರು. ನಂತರ ಮಾತನಾಡಿದ ಬಹುಭಾಷೆ ನಟ ಸುಮನ್, ನಾನು ಹೆಡ್ ಕಾನ್ಸ್‌ಟೇಬಲ್ ಪಾತ್ರ ನಿರ್ವಹಿಸುತ್ತಿದ್ದೇನೆ. ನಾನು ಹಾಗೂ ಶರತ್ ಕುಮಾರ್ ಬಹಳ ದಿನಗಳ ನಂತರ ಒಟ್ಟಾಗಿ ಅಭಿನಯಿಸುತ್ತಿದ್ದೇವೆ ಎಂದು ತಿಳಿಸಿದರು.
ನಟ ನಿರಂಜನ್ ಸುಧೀಂದ್ರ ಮಾತನಾಡಿ, ಈ ಸಿನಿಮಾ ಫೈಟ್ನೊಂದಿಗೆ ಶುರುವಾಗಿ ಫೈಟ್ನಲ್ಲೇ ಮುಕ್ತಾಯವಾಗುತ್ತದೆ. ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿರುವುದರಿಂದ ನಾನು ಸಾಕಷ್ಟು ಅಭ್ಯಾಸ ಮಾಡಿದ್ದೇನೆ. ನನ್ನ ಸಿನಿಮಾ ವೃತ್ತಿ ಜೀವನದಲ್ಲೇ ಅದ್ಧೂರಿ ಸಿನಿಮಾ ಇದು ಎಂದರೆ ತಪ್ಪಾಗಲಾರದು. ಉತ್ತರ ಹಾಗೂ ದಕ್ಷಿಣ ಭಾರತದ ದಿಗ್ಗಜ ನಟರೊಂದಿಗೆ ನಟಿಸುವ ಅವಕಾಶ ನನಗೆ ಈ ಚಿತ್ರದಲ್ಲಿ ಸಿಕ್ಕಿದೆ. ಎರಡು ಶೇಡ್ಗಳಲ್ಲಿ ನನ್ನ ಪಾತ್ರವಿರುತ್ತದೆ ಎಂದರು. ಬಳಿಕ ನಟಿ ಸೌಮ್ಯ ಮೆನನ್ ಮಾತನಾಡಿ, ನಾನು ಮೂಲತಃ ಕೇರಳದವಳು. ಕನ್ನಡದಲ್ಲಿ ಮೊದಲ ಚಿತ್ರ ಇದು ಎಂದು ತಿಳಿಸಿದರು.