ಮಂಗಳೂರು (ದಕ್ಷಿಣ ಕನ್ನಡ):ಈಗಂತೂಭಾರತೀಯ ಚಿತ್ರರಂಗದ ದಶದಿಕ್ಕುಗಳಿಂದಲೂ ಕೇಳಿ ಬರುತ್ತಿರುವ ಹೆಸರು ಒಂದೇ, ಅದು ಕಾಂತಾರ. ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿರುವ ಈ ಸಿನಿಮಾ ಇದೀಗ ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆಯುತ್ತಿದೆ. ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿಯೂ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ಸಿನಿಮಾದ ಪ್ರತೀ ಪಾತ್ರಗಳು ಮನೆ ಮಾತಾಗಿವೆ.
ಮೈ ಮೇಲೆ ದೈವ ಆಹ್ವಾಹನ: ಕಾಂತಾರ ಸಿನಿಮಾದ ಪ್ರತಿ ಪಾತ್ರ ಕೂಡಾ ನೆನಪಿನಲ್ಲಿಟ್ಟುಕೊಳ್ಳುವಂಥದ್ದೇ. ಸಣ್ಣ ಸಣ್ಣ ಪಾತ್ರಗಳನ್ನೂ ಸಹ ಮರೆಯದ ರೀತಿಯಲ್ಲಿ ಚಿತ್ರದಲ್ಲಿ ಅನಾವರಣಗೊಳಿಸಲಾಗಿದೆ. ಇದರಲ್ಲಿ ನಟ ನವೀನ್ ಬೋಂದೆಲ್ ಅವರ ಪಾತ್ರವೂ ಒಂದು. ಈ ಸಿನಿಮಾದ ಆರಂಭದ ಸೀನ್ನಲ್ಲಿ ಹಿಂದಿನ ಕಥೆ ಹೇಳುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ದೈವಾಹ್ವಾನವಾಗುತ್ತದೆ. ಆ ಪಾತ್ರವನ್ನು ನವೀನ್ ಬೋಂದೆಲ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಥೇಟ್ ಮೈ ಮೇಲೆ ದೈವ ಬಂದವರಂತೆ ಅಭಿನಯಿಸಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇವರ ಅಭಿನಯಕ್ಕೆ ಎಲ್ಲೆಡೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು ಅನುಭವ ಹಂಚಿಕೊಂಡರು.
ಬಸ್ ಕಂಡಕ್ಟರ್ ಆಗಿ ವೃತ್ತಿಜೀವನ ಆರಂಭ: ನವೀನ್ ಬೋಂದೆಲ್ ಅವರು ನಗರದ ಸಿಟಿ ಬಸ್ ಕಂಡಕ್ಟರ್ ಆಗಿ ವೃತ್ತಿಜೀವನ ಆರಂಭಿಸಿದವರು. ಇದರೊಂದಿಗೆ ರಂಗಭೂಮಿಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ಕಂಡಕ್ಟರ್ ಕೆಲಸ ಬಿಟ್ಟು ಮಸಾಲಾ ಬ್ಯುಸಿನೆಸ್ ಆರಂಭಿಸಿದ್ದರು. ಕೊರೊನಾ ಸಂದರ್ಭದಲ್ಲಿ ಆ ವ್ಯವಹಾರವೂ ಕೂಡ ಕೈ ಹಿಡಿಯಲಿಲ್ಲ. ಇದೀಗ ಪೂರ್ಣ ಪ್ರಮಾಣದಲ್ಲಿ ರಂಗ ಕಲಾವಿದರಾಗಿ ಕಲಾ ಸೇವೆ ಮಾಡುತ್ತಿದ್ದಾರೆ. ಪ್ರಸ್ತುತ ತುಳುವೆರ್ ತುಡರ್ ಎಂಬ ಕಲಾತಂಡದಲ್ಲಿ ನೆಗೆಟಿವ್ ಪಾತ್ರ ಮಾಡುತ್ತಿದ್ದಾರೆ.
ದೈವ ದರ್ಶನದ ಪಾತ್ರ:ಇವರಿಗೆ ನಟ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದಲ್ಲಿ ಪಾತ್ರ ಮಾಡುವ ಕುರಿತ ಮಾಹಿತಿ ಸಿಕ್ಕಿದ್ದು ದೈವ ಪಾತ್ರಿಯೊಬ್ಬರಿಂದ. ಈ ಸಿನಿಮಾದ ಆರಂಭದಲ್ಲಿ ದೈವ ದರ್ಶನದ ಪಾತ್ರ ಬರುತ್ತದೆ. ಈ ಪಾತ್ರಕ್ಕೆ ನವೀನ್ ಬೋಂದೆಲ್ ಅವರನ್ನು ಆಯ್ಕೆ ಮಾಡಲಾಗುತ್ತದೆ.