ಕರ್ನಾಟಕ

karnataka

ETV Bharat / entertainment

ರಾಷ್ಟ್ರೀಯ ಕ್ರೀಡಾ ದಿನ: ನೀವು ನೋಡಲೇಬೇಕಾದ ಕ್ರೀಡಾ ಸ್ಫೂರ್ತಿದಾಯಕ ಸಿನಿಮಾಗಳಿವು

ಖ್ಯಾತ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದ ನಿಮಿತ್ತ ಕ್ರೀಡಾ ಸ್ಫೂರ್ತಿದಾಯಕ ಸಿನಿಮಾಗಳನ್ನು ನೋಡುವುದಾದರೆ..

National Sports Day: Chak De India to 83, top movies that celebrate sports
ಮೇಜರ್ ಧ್ಯಾನ್ ಚಂದ್

By

Published : Aug 30, 2022, 7:36 PM IST

Updated : Aug 30, 2022, 8:03 PM IST

ಆಗಷ್ಟ್​ 29 ಖ್ಯಾತ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನ. ಅವರ ಹುಟ್ಟಿದ ದಿನದ ಅಂಗವಾಗಿ ದೇಶಾದ್ಯಂತ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. ಓರ್ವ ಕ್ರೀಡಾಭಿಮಾನಿಯಾಗಿ ಈ ವಿಶೇಷ ದಿನದಂದು ಯಾವತ್ತೂ ಮರೆಯಲಾಗದ ಟಾಪ್​ ಸ್ಫೂರ್ತಿದಾಯಕ ಕ್ರೀಡಾ ಬಯೋಪಿಕ್‌ಗಳನ್ನು ನೋಡುವುದಾರೆ...

ಭಾಗ್ ಮಿಲ್ಖಾ ಭಾಗ್​ ಚಿತ್ರದ ಪೋಸ್ಟರ್​

ಭಾಗ್ ಮಿಲ್ಖಾ ಭಾಗ್​.. ಬಾಲಿವುಡ್​ನ ಯಶಸ್ವಿ ಚಿತ್ರಗಳಲ್ಲಿ ಇದು ಒಂದು. ಕಾಮನ್‌ವೆಲ್ತ್ ಚಾಂಪಿಯನ್ ಮಿಲ್ಖಾ ಸಿಂಗ್ ಅವರ ಜೀವನದ ಕಥೆ ಇದಾಗಿದ್ದು, ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿತು. ರಾಕೇಶ್ ಓಂ ಪ್ರಕಾಶ್ ಮೆಹ್ರಾ ಅವರ ನಿರ್ದೇಶನದಲ್ಲಿ 2013ರಲ್ಲಿ ತೆರೆ ಕಂಡ ಈ ಚಿತ್ರದಲ್ಲಿ ಫರ್ಹಾನ್ ಅಖ್ತರ್ ಮುಖ್ಯ ಪಾತ್ರದಲ್ಲಿ ಮಿಂಚಿದ್ದರು. ಈ ಸಿನಿಮಾ ಮಾಡಲು ಅನುಮತಿ ನೀಡಿದ್ದ 'ಫ್ಲೈಯಿಂಗ್ ಸಿಖ್' ಪಡೆದ ಹಣ ಕೇವಲ 1 ರೂಪಾಯಿ. 2013ರಲ್ಲಿ ಬಿಡುಗಡೆಯಾದ ಭಾಗ್ ಮಿಲ್ಖಾ ಭಾಗ್ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಅಲ್ಲದೇ ಕೋಟಿ ಕೋಟಿ ಹಣ ಕಲೆಕ್ಷನ್ ಮಾಡಿತ್ತು. ಸುಮಾರು 200 ಕೋಟಿಗೂ ಅಧಿಕ ಹಣ ಕಲೆಕ್ಷನ್ ಮಾಡಿದೆ.

ಚಕ್ ದೇ ಇಂಡಿಯಾ ಚಿತ್ರದ ಪೋಸ್ಟರ್​

ಕ್ರೀಡಾ ಸ್ಫೂರ್ತಿದಾಯಕ ಚಿತ್ರಗಳಲ್ಲಿ ಮೊದಲು ಬರುವುದು ಶಾರುಖ್ ಖಾನ್ ನಟನೆಯ 'ಚಕ್ ದೇ ಇಂಡಿಯಾ' ಚಿತ್ರ. ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ ಒಂದಾಗಿದೆ. ಶಿಮಿತ್ ಅಮೀನ್ ನಿರ್ದೇಶಿಸಿದ ಈ ಚಿತ್ರವು ಭಾರತೀಯ ರಾಷ್ಟ್ರೀಯ ಮಹಿಳಾ ಹಾಕಿ ತಂಡದ ಪ್ರಯಾಣವನ್ನು ಆಧರಿಸಿದೆ. ಶಾರುಖ್ ತಂಡದ ತರಬೇತುದಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 10, 2007 ರಂದು ಬಿಡುಗಡೆಯಾದ ಈ ಚಿತ್ರವು ಸಂಪೂರ್ಣ ಮನರಂಜನೆ ಮತ್ತು ಕ್ರೀಡಾ ಸ್ಫೂರ್ತಿ ತುಂಬುವ ಚಿತ್ರವಾಗಿದೆ.

ದಂಗಲ್​ ಚಿತ್ರದ ಪೋಸ್ಟರ್​

ಕ್ರೀಡಾ ಸ್ಫೂರ್ತಿ ತುಂಬುವ ಮತ್ತೊಂದು ಚಿತ್ರ‘ದಂಗಲ್’. ಭಾರತೀಯ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಮತ್ತು ಅವರ ಪುತ್ರಿಯರಾದ ಗೀತಾ ಮತ್ತು ಬಬಿತಾ ಅವರ ಜೀವನಾಧಾರಿತ ಚಿತ್ರ ಇದಾಗಿದೆ. ಹಳ್ಳಿಯೊಂದರಿಂದ ಅವರು ವಿಶ್ವ ದರ್ಜೆಯ ಕುಸ್ತಿಪಟುಗಳಾಗುವ ಮತ್ತು ಅವರು ಅನುಭವಿಸಿದ ಕಷ್ಟಗಳನ್ನು ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ. ಸಿದ್ಧಾರ್ಥ್ ರಾಯ್ ಕಪೂರ್, ಅಮೀರ್ ಖಾನ್ ಮತ್ತು ಅವರ ಪತ್ನಿ ಕಿರಣ್ ರಾವ್ ಈ ಚಿತ್ರದ ನಿರ್ಮಾಣ ಮಾಡಿದ್ದು ನಿತೇಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಫಾತಿಮಾ ಸನಾ ಶೇಖ್, ಝೈರಾ ವಾಸಿಮ್, ಸನ್ಯಾ ಮಲ್ಹೋತ್ರಾ ಮತ್ತು ಅಮೀರ್ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 23 ಡಿಸೆಂಬರ್​ 2016ರಲ್ಲಿ ತೆರೆ ಕಂಡಿತ್ತು.

83 ಚಿತ್ರದ ಪೋಸ್ಟರ್​

ರಣವೀರ್ ಸಿಂಗ್ ನಾಯಕನಾಗಿ ನಟಿಸಿರುವ '83’ಚಿತ್ರ ಕೂಡ ಇದೇ ಮಾದರಿಯನ್ನು ಹೊತ್ತು ಬಂದಿತು. ಮಾಜಿ ಕ್ರಿಕೆಟರ್​ ಕಪಿಲ್​ ದೇವ್​​ ಅವರ ಜೀವನ ಆಧಾರಿತ ಹಾಗೂ ಟೀಂ ಇಂಡಿಯಾವು 1983ರಲ್ಲಿ ವಿಶ್ವಕಪ್​​​ ಗೆದ್ದಿರುವ ವಿಷಯವನ್ನಿಟ್ಟುಕೊಂಡು ನಿರ್ಮಾಣಗೊಂಡಿರುವ ಸುಂದರ ಕಥೆ ಇದಾಗಿದೆ. ಟೀಂ ಇಂಡಿಯಾ ಕ್ಯಾಪ್ಟನ್ ಕಪಿಲ್ ದೇವ್​ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಂಡರೆ, ಅವರ ಪತ್ನಿಯಾಗಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ. ಚಿತ್ರಕ್ಕೆ ಕಬೀರ್ ಖಾನ್ ನಿರ್ದೇಶನ ಹೇಳಿದ್ದು ತಾಹಿರ್ ರಾಜ್ ಭಾಸಿನ್, ಸಾಕಿಬ್ ಸಲೀಮ್, ಆಮಿ ವಿರ್ಕ್, ಹಾರ್ಡಿ ಸಂಧು, ಪಂಕಜ್ ತ್ರಿಪಾಠಿ ಮತ್ತು ಸಾಹಿಲ್ ಖಟ್ಟರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಲಗಾನ್​ ಚಿತ್ರದ ಪೋಸ್ಟರ್​

'ಲಗಾನ್'.. ನಟ ಅಮೀರ್ ಖಾನ್ ವೃತ್ತಿ ಜೀವನದ ದಿಕ್ಕನ್ನೇ ಬದಲಿಸಿದ ಚಿತ್ರವಿದು. ಭಾರತದ ಇತಿಹಾಸದಲ್ಲಿ ಮದರ್ ಇಂಡಿಯಾದ ನಂತರ ಆಸ್ಕರ್‌ನ ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರ ವಿಭಾಗದಲ್ಲಿ 'ಲಗಾನ್' ನಾಮನಿರ್ದೇಶನಗೊಂಡ ಎರಡನೇ ಏಕೈಕ ಚಲನಚಿತ್ರವಾಗಿದೆ. ಹಳ್ಳಿಯ ಮೇಲೆ ಹೇರಲಾಗಿದ್ದ ತೆರಿಗೆಯನ್ನು (ಲಗಾನ್) ತೆಗೆದು ಹಾಕುವ ಸಂಬಂಧ ಸ್ಥಳೀಯರು ಮತ್ತು ಬ್ರಿಟಿಷ್ ಸರ್ಕಾರದ ನಡುವೆ ನಡೆದ ಕ್ರಿಕೆಟ್ ಪಂದ್ಯದ ಸುತ್ತ ಈ ಚಿತ್ರವನ್ನು ಹೆಣೆಯಲಾಗಿದೆ. ಜೂ. 15, 2001 ರಂದು ಬಿಡುಗಡೆಯಾದ ಚಿತ್ರದಲ್ಲಿ ಅಮೀರ್ ಖಾನ್, ಗ್ರೇಸಿ ಸಿಂಗ್, ರಾಚೆಲ್ ಶೆಲ್ಲಿ, ಪಾಲ್ ಬ್ಲಾಕ್‌ಥಾರ್ನ್ ಮತ್ತು ರಘುಬೀರ್ ಯಾದವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಶುತೋಷ್ ಗೋವಾರಿಕಲ್ ನಿರ್ದೇಶನವಿದೆ.

ಎಂಎಸ್ ಧೋನಿ ಚಿತ್ರದ ಪೋಸ್ಟರ್​

'ಎಂ.ಎಸ್. ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ'.. ಇದು ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧರಿತ ಚಿತ್ರ. ಭಾರತೀಯ ಕ್ರಿಕೆಟ್​ ತಂಡದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಧೋನಿ ಪಾತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ (ಮೃತಪಟ್ಟಿದ್ದಾರೆ) ಕಾಣಿಸಿಕೊಂಡಿದ್ದಾರೆ. ಕ್ರೀಡಾ ಸ್ಫೂರ್ತಿ ತುಂಬುವ ಚಿತ್ರಗಳಲ್ಲಿ ಇದೂ ಕೂಡ ಒಂದು. ಸುಶಾಂತ್ ಸಿಂಗ್ ರಜಪೂತ್ ಅವರ ಜೊತೆಗೆ ದಿಶಾ ಪಟಾನಿ ಮತ್ತು ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ನೀರಜ್ ಪಾಂಡೆ ನಿರ್ದೇಶಿಸಿದ ಈ ಚಿತ್ರವನ್ನು 30 ಸೆಪ್ಟೆಂಬರ್ 2016 ರಂದು ಬಿಡುಗಡೆ ಮಾಡಲಾಯಿತು. ಸುಶಾಂತ್ ಸಿಂಗ್ ರಜಪೂತ್​ ಸಿನಿಮಾ ಪಯಣದಲ್ಲಿ ಇದು ಯಾವತ್ತೂ ಮರೆಯಲಾಗದ ಚಿತ್ರವಾಗಿದೆ.

ಮೇರಿ ಕೋಮ್ ಚಿತ್ರದ ಪೋಸ್ಟರ್​

2014ರಲ್ಲಿ ತೆರೆಕಂಡ ಮೇರಿ ಕೋಮ್ ಜೀವನಚಿರಿತ್ರೆ ಆಧಾರಿತ ಸಿನಿಮಾ 'ಮೇರಿ ಕೋಮ್' ಹಲವರಿಗೆ ಅಷ್ಟೇ ಅಲ್ಲದೇ ಇತರರಿಗೂ ಸ್ಫೂರ್ತಿಯಾಯ್ತು. ಕ್ರೀಡಾ ಚಿಲುಮೆಯಾಗಿ ತೆರೆಕಂಡ ಈ ಚಿತ್ರದಲ್ಲಿ ಮೇರಿ ಕೋಮ್ ಪಾತ್ರಕ್ಕೆ ಪ್ರಿಯಾಂಕಾ ಚೋಪ್ರಾ ಅವರು ಬಣ್ಣ ಹಚ್ಚಿದ್ದರು. ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಗೆಲುವು ಸೇರಿದಂತೆ ಓರ್ವ ಕ್ರೀಡಾಪಟು ತಾಯಿಯಾದ ನಂತರವೂ ಏನೆಲ್ಲ ಸಾಧನೆ ಮಾಡಬಹುದು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಓಮಂಗ್ ಕುಮಾರ್ ನಿರ್ದೇಶನದಲ್ಲಿ ದರ್ಶನ್ ಕುಮಾರ್ ಕೂಡ ನಟಿಸಿದ್ದರು.

ಇದಲ್ಲದೇ ಇಂತಹ ಅನೇಕ ಚಿತ್ರಗಳು ತೆರೆಕಂಡಿವೆ.'ಅಜರ್​, ಸಚಿನ್ : ಎ ಬಿಲಿಯನ್ ಡ್ರೀಮ್','ಶಭಾಷ್ ಮಿಥು' ಸೇರಿದಂತೆ ಹಲವು ಕ್ರೀಡಾಪಟುಗಳ ಬಯೋಪಿಕ್​ಗಳು ತೆರೆಕಂಡಿದೆ. ಇನ್ನು ಬಿಡುಗಡೆಯಾಗಬೇಕಾದ ಚಕ್ಡಾ ಎಕ್ಸ್‌ಪ್ರೆಸ್ - ಜೂಲನ್ ಗೋಸ್ವಾಮಿ ಬಯೋಪಿಕ್, ರಾಹುಲ್​ ದ್ರಾವಿಡ್ ಬಯೋಪಿಕ್​, ಸೌರವ್ ಗಂಗೂಲಿ ಬಯೋಪಿಕ್, ಶೇನ್ ವಾರ್ನ್ ಬಯೋಪಿಕ್, ಕೌನ್ ಪ್ರವೀಣ್ ತಾಂಬೆ-ಪ್ರವೀಣ್ ತಾಂಬೆ ಬಯೋಪಿಕ್, ಮುತ್ತಯ್ಯ ಮುರಳೀಧರನ್ ಬಯೋಪಿಕ್, ಯುವರಾಜ್ ಸಿಂಗ್ ಸೇರಿದಂತೆ ಹಲವರ ಜೀವನ ಚರಿತ್ರೆಗಳು ತೆರೆಕಾಣಲಿವೆ ಎನ್ನಲಾಗುತ್ತದೆ.

Last Updated : Aug 30, 2022, 8:03 PM IST

ABOUT THE AUTHOR

...view details