ತಿರುವನಂತಪುರಂ (ಕೇರಳ): ರಾಜ್ಯದಿಂದ ನಾಪತ್ತೆಯಾದ 32,000 ಮಹಿಳೆಯರು ಉಗ್ರಗಾಮಿ ಸಂಘಟನೆ ಐಎಸ್ಐಎಸ್ ಸೇರ್ಪಡೆಗೊಂಡಿರುವ ಕಥೆಯನ್ನು ಬಿಂಬಿಸುವ 'ದಿ ಕೇರಳ ಸ್ಟೋರಿ' ಸಿನಿಮಾದಲ್ಲಿ ಮಾಡಿರುವ ಆರೋಪವನ್ನು ಸಾಬೀತುಪಡಿಸುವ ವ್ಯಕ್ತಿಗೆ ಮುಸ್ಲಿಂ ಯೂತ್ ಲೀಗ್ ನಾಯಕ ಪಿಕೆ ಫಿರೋಜ್ ಅವರು 1 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಮೇ 4 ರಂದು ಪ್ರತಿ ಜಿಲ್ಲೆಯಲ್ಲೂ ಸಾಕ್ಷ್ಯಗಳನ್ನು ಒದಗಿಸಲು ಸಂಗ್ರಹ ಕೇಂದ್ರಗಳನ್ನು ತೆರೆಯಲಾಗುತ್ತದೆ. ಹಾಗಾಗಿ ಯಾರ ಬಳಿ ಸಾಕ್ಷಿ ಇದೆಯೋ ಅದನ್ನು ಕೌಂಟರ್ಗಳಲ್ಲಿ ಸಲ್ಲಿಸಿ ಯಾವುದೇ ತೊಂದರೆ ಇಲ್ಲದೇ ಒಂದು ಕೋಟಿ ರೂಪಾಯಿ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.
"32,000 ಕೇರಳಿಗರು ಮತಾಂತರಗೊಂಡು ಸಿರಿಯಾಕ್ಕೆ ಪಲಾಯನ ಮಾಡಿದ್ದಾರೆ ಎಂಬ ಆರೋಪವನ್ನು ಸಾಬೀತುಪಡಿಸಿ. ಸವಾಲನ್ನು ಸ್ವೀಕರಿಸಿ ಮತ್ತು ಸಾಕ್ಷ್ಯವನ್ನು ಸಲ್ಲಿಸಿ. ಲವ್ ಜಿಹಾದ್ ಮೂಲಕ ಧರ್ಮ ಮತಾಂತರ ಮಾಡಿ ಸಿರಿಯಾಕ್ಕೆ ಕರೆತಂದಿರುವ ಆರೋಪ ಕೇವಲ ರಾಜಕೀಯ ಲಾಭ ಪಡೆಯುವ ಗುರಿ ಹೊಂದಿರುವ ಸಂಘಪರಿವಾರದ ಕಾರ್ಖಾನೆಯ ದೊಡ್ಡ ಸುಳ್ಳುಗಳಲ್ಲಿ ಒಂದಾಗಿದೆ" ಎಂದು ಪಿಕೆ ಫಿರೋಜ್ ಆರೋಪಿಸಿದ್ದಾರೆ. ಅನೇಕ ರಾಜಕೀಯ ವ್ಯಕ್ತಿಗಳು, ಸಂಘಟನೆಗಳು, ಮುಸ್ಲಿಂ ಸಮಿತಿಗಳು ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ತೆರೆಗೆ ಬರಲು ಬಿಡಬಾರದು ಎಂಬುದಾಗಿ ಹೇಳುತ್ತಿದ್ದಾರೆ.
ದ್ವೇಷ ಉಂಟುಮಾಡಲು 'ದಿ ಕೇರಳ ಸ್ಟೋರಿ' ನಿರ್ಮಾಣ:ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಮತ್ತು ರಾಜ್ಯದ ವಿರುದ್ಧ ದ್ವೇಷದ ಪ್ರಚಾರ ಹರಡುವ ಉದ್ದೇಶದಿಂದ ಸಿನಿಮಾ ನಿರ್ಮಿಸಲಾಗಿದೆ ಎಂದು ಟ್ರೇಲರ್ ಮೂಲಕ ತಿಳಿಯುತ್ತದೆ ಎಂಬುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೂರಿದ್ದಾರೆ. ಜಾತ್ಯತೀತತೆಯ ನೆಲವಾದ ಕೇರಳದಲ್ಲಿ ಧಾರ್ಮಿಕ ಉಗ್ರವಾದದ ಕೇಂದ್ರವಾಗಿ ತನ್ನನ್ನು ತಾನು ಗುರುತಿಸಿಕೊಂಡಿರುವ ಸಂಘ ಪರಿವಾರದ ಪ್ರಚಾರವನ್ನು ಹರಡಲು ಚಿತ್ರ ಪ್ರಯತ್ನಿಸುತ್ತಿದೆ. ಕೇರಳದಲ್ಲಿ 32,000 ಮಹಿಳೆಯರು ಇಸ್ಲಾಂಗೆ ಮತಾಂತರಗೊಂಡು ಇಸ್ಲಾಮಿಕ್ ಸ್ಟೇಟ್ ಸೇರಿದ್ದಾರೆ ಎಂಬ ದೊಡ್ಡ ಸುಳ್ಳು ಚಿತ್ರದ ಟ್ರೇಲರ್‌ನಲ್ಲಿದೆ ಎಂದು ದೂರಿದ್ದಾರೆ.