ನಾಗಿನ್ ಖ್ಯಾತಿಯ ನಟಿ ಮೌನಿ ರಾಯ್ ಅವರು ಕಿರುತೆರೆಯಿಂದ ಬಾಲಿವುಡ್ವರೆಗೂ ಸಖತ್ ಸದ್ದು ಮಾಡಿದ ನಟಿ. ಫ್ಯಾಷನ್ ಸೆನ್ಸ್ನಿಂದ ಅನೇಕರಿಗೆ ಸ್ಫೂರ್ತಿ ಕೂಡ ಆಗಿದ್ದಾರೆ. ಫ್ಯಾಷನ್ ಐಕಾನ್ ಅಂತಲೇ ಜನಪ್ರಿಯರಾಗಿರುವ ನಟಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ಹೆಚ್ಚೆಚ್ಚು ಫೋಟೋಗಳನ್ನು ಹಂಚಿಕೊಳ್ಳುತ್ತೇ ಇರುತ್ತಾರೆ. ಇದೀಗ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ, ಪರ್ವತ ಪ್ರದೇಶದಲ್ಲಿ ಕಳೆದ ಕ್ಷಣಗಳ ಒಂದು ನೋಟವನ್ನು ನೀಡುವ ವಿಡಿಯೋ ಹಂಚಿಕೊಂಡಿದ್ದಾರೆ.
ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಮೌನಿ ರಾಯ್, "ಪರ್ವತಗಳಲ್ಲಿ ಒಂದು ದಿನ" ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಸುಂದರ ಕ್ಷಣಗಳ ವಿಡಿಯೋದಲ್ಲಿ, ನಾಗಿನ್ ನಟಿ ನೈಸರ್ಗಿಕ ಸೌಂದರ್ಯ, ಸ್ಥಳೀಯ ಆಹಾರ ಮತ್ತು ಲಾಂಗ್ ಡ್ರೈವ್‌ಗಳನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಕನಿಷ್ಠ ಮೇಕ್ ಅಪ್, ಬ್ಯಾಕ್ಲೆಸ್ ವೈಟ್ ಡ್ರೆಸ್ನಲ್ಲಿ ಎಂದಿನಂತೆ ಮೌನಿ ಮನಸೆಳೆಯುತ್ತಿದ್ದರು. ಆದರೆ ಯಾವ ಸ್ಥಳ ಎಂಬುದನ್ನು ಬಹಿರಂಗಪಡಿಸಿಲ್ಲ.
ಬಹುಭಾಷಾ ನಟಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ ತಕ್ಷಣ, ಅಭಿಮಾನಿಗಳು ಮತ್ತು ಸ್ನೇಹಿತರು ಕಾಮೆಂಟ್ ವಿಭಾಗಕ್ಕೆ ಸೇರಿ ತಮ್ಮ ಪ್ರೀತಿಯ ಮಳೆ ಸುರಿಸುತ್ತಿದ್ದಾರೆ. ಮೌನಿ ರಾಯ್ ಆತ್ಮೀಯ ಸ್ನೇಹಿತೆ, ನಟಿ ದಿಶಾ ಪಟಾನಿ ಕಾಮೆಂಟ್ ಸೆಕ್ಷನ್ನಲ್ಲಿ "ತುಂಬಾ ಸುಂದರ" ಎಂದು ಬರೆದು ಕೆಂಪು ಹೃದಯದ ಎಮೋಜಿಗಳನ್ನು ಹಾಕಿದರು. ಮತ್ತೊಂದೆಡೆ ಅಭಿಮಾನಿಯೊಬ್ಬರು, "ದಯವಿಟ್ಟು ನಾಗಿನ್‌ಗೆ ಹಿಂತಿರುಗಿ" ಎಂದು ಕೇಳಿಕೊಂಡಿದ್ದಾರೆ. ಮತ್ತೋರ್ವ ಅಭಿಮಾನಿ, "ಲವ್ ದಿಸ್ ಮೈ ಸಿಟಿ" ಎಂದು ಕಾಮೆಂಟ್ ಮಾಡಿದ್ದಾರೆ. ಉಳಿದಂತೆ ಅನೇಕರು ಪೋಸ್ಟ್‌ಗೆ ಪ್ರತಿಕ್ರಿಯಿಸಲು ಹೃದಯ ಕಣ್ಣುಗಳಿರುವ ಎಮೋಜಿ, ಫೈಯರ್ ಮತ್ತು ರೆಡ್ ಹಾರ್ಟ್ ಎಮೋಜಿಗಳನ್ನು ಬಳಸಿದ್ದಾರೆ.