ಭಾರತೀಯ ಚಿತ್ರರಂಗದಲ್ಲಿ ನಟನಾಗಿ ಮಾತ್ರವಲ್ಲದೇ, ನಿರ್ದೇಶಕರಾಗಿಯೂ ಗುರುತಿಸಿಕೊಂಡವರು ಪೃಥ್ವಿರಾಜ್ ಸುಕುಮಾರನ್. ಇವರು ಆ್ಯಕ್ಷನ್ ಕಟ್ ಹೇಳುತ್ತಿರುವ ಮುಂಬರುವ ಬಹುನಿರೀಕ್ಷಿತ ಚಿತ್ರ 'L2E - ಎಂಪುರಾನ್'. ಪೃಥ್ವಿ ಡೈರೆಕ್ಷನ್ನಲ್ಲಿ ಮೂಡಿಬರುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಮಾಲಿವುಡ್ ಸೂಪರ್ಸ್ಟಾರ್ ಮೋಹನ್ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಅನ್ನು ಚಿತ್ರತಂಡ ಇದೀಗ ಬಿಡುಗಡೆಗೊಳಿಸಿದೆ.
2019ರಲ್ಲಿ ತೆರೆಕಂಡ ಪೊಲಿಟಿಕಲ್ ಆ್ಯಕ್ಷನ್ ಥ್ರಿಲ್ಲರ್ ಲೂಸಿಫರ್ನ ಮುಂದುವರೆದ ಭಾಗವೇ 'L2E - ಎಂಪುರಾನ್'. ಈ ಸಿನಿಮಾ ಮೂಲಕ ತಮ್ಮ ನಿರ್ದೇಶನದ ಕೌಶಲ್ಯವನ್ನು ಪ್ರದರ್ಶಿಸಿದ ಪೃಥ್ವಿರಾಜ್ ಸುಕುಮಾರನ್ ಅವರ ಮೂರನೆಯ ಸಿನಿಮಾವಿದು. ಇದಲ್ಲದೇ, 2022ರ ಬ್ಲಾಕ್ಬಸ್ಟರ್ ಹಿಟ್ 'ಬ್ರೋ ಡ್ಯಾಡಿ' ಚಿತ್ರವನ್ನು ಕೂಡ ಇವರೇ ನಿರ್ದೇಶನ ಮಾಡಿದ್ದರು. ಉತ್ತಮ ಕಥೆಗಳನ್ನು ಆಯ್ದು ಪ್ರೇಕ್ಷಕರಿಗೆ ನೀಡುವಲ್ಲಿ ಪೃಥ್ವಿ ಮುಂದಿದ್ದಾರೆ. ಹೀಗಾಗಿ 'L2E - ಎಂಪುರಾನ್' ಮೇಲೆ ಮುಗಿಲೆತ್ತರದ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.
ಫಸ್ಟ್ ಲುಕ್ ಅನ್ನು ಹಂಚಿಕೊಳ್ಳಲು ಪೃಥ್ವಿರಾಜ್ ಸುಕುಮಾರನ್ ಸೋಷಿಯಲ್ ಮೀಡಿಯಾವನ್ನು ವೇದಿಕೆಯನ್ನಾಗಿ ಬಳಸಿಕೊಂಡರು. "3 ನೇ ನಿರ್ದೇಶನ. ಫ್ರ್ಯಾಂಚೈಸಿಯ 2 ನೇ ಭಾಗ. ಫಸ್ಟ್ ಲುಕ್" ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್ನಲ್ಲಿ, ಮೋಹನ್ಲಾಲ್ ಗನ್ ಹಿಡಿದುಕೊಂಡು ಕ್ಯಾಮರಾಗೆ ಬೆನ್ನು ಹಾಕಿ ನಿಂತಿದ್ದಾರೆ. ಆ್ಯಕ್ಷನ್ ಮೂಡ್ನಲ್ಲಿರುವಂತೆ ಕಾಣಿಸುತ್ತಿದ್ದಾರೆ. ಬ್ಲಾಕ್ಬಸ್ಟರ್ 'ಲೂಸಿಫರ್'ನ ಮುಂದುವರೆದ ಭಾಗವಾದ್ದರಿಂದ ಪೋಸ್ಟರ್ ಸಖತ್ ವೈರಲ್ ಆಗುತ್ತಿದೆ.