ಸಿನಿಮಾ ಎಂಬ ಬಣ್ಣದ ಲೋಕಕ್ಕೆ ದಿನೇ ದಿನೆ ಟ್ಯಾಲೆಂಟ್ ಇರುವ ನಿರ್ದೇಶಕರು ಹಾಗೂ ನಟ ನಟಿಯರು ಎಂಟ್ರಿ ಆಗ್ತಾನೆ ಇದೆ. ಇದೀಗ ಹೇಮಂತ್ ಕುಮಾರ್ ಎಂಬ ಯುವ ನಟ ಸಿನಿಮಾಗೆ 'ರಿಚ್ಚಿ' ಅಂತಾ ಟೈಟಲ್ ಇಟ್ಟುಕೊಂಡು ಗಾಂಧಿನಗರಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರು ನಟಿಸಿ, ನಿರ್ದೇಶಿಸಿ ಹಾಗೂ ನಿರ್ಮಾಣ ಮಾಡಿರುವ 'ರಿಚ್ಚಿ' ಸಿನಿಮಾದ ಶೂಟಿಂಗ್ ಸೈಲೆಂಟ್ ಆಗಿಯೇ ಮುಗಿದಿದೆ. ಈ ಮಧ್ಯೆ ಚಿತ್ರತಂಡದಿಂದ ಹೊಸ ಅಪ್ಡೇಟ್ ಹೊರಬಿದ್ದಿದೆ.
'ಟಗರು' ಪುಟ್ಟಿ ಮಾನ್ವಿತಾ ಕಾಮತ್ ಸ್ಯಾಂಡಲ್ವುಡ್ 'ಟಗರು ಪುಟ್ಟಿ' ಖ್ಯಾತಿಯ ಮಾನ್ವಿತಾ ಕಾಮತ್ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಖ್ಯಾತ ಗಾಯಕ ಸೋನು ನಿಗಂ ಹಾಡಿರುವ, ಅಗಸ್ತ್ಯ ಸಂಗೀತ ಸಂಯೋಜಿಸಿರುವ 'ಸನಿಹ ನೀ ಇರುವಾಗ...' ಎಂಬ ಹಾಡಿಗೆ ಮಾನ್ವಿತಾ ಕಾಮತ್ ಸೊಂಟ ಬಳುಕಿಸಲಿದ್ದಾರೆ. ಜೊತೆಗೆ ಸಿನಿಮಾದ ಕೆಲವು ದೃಶ್ಯಗಳಲ್ಲೂ ಅವರು ಅಭಿನಯಿಸಿದ್ದಾರೆ ಎಂದು ಯುವ ನಟ ಹೇಮಂತ್ ಕುಮಾರ್ ಮಾಹಿತಿ ನೀಡಿದ್ದಾರೆ.
'ರಿಚ್ಚಿ' ಸಿನಿಮಾದ ಶೂಟಿಂಗ್ ಬಹುತೇಕ ಈಗಾಗಲೇ ಮುಕ್ತಾಯಗೊಂಡಿದೆ. ಒಂದು ಹಾಡು ಹಾಗೂ ಕೆಲವು ಮಾತಿನ ಭಾಗದ ಚಿತ್ರೀಕರಣ ಮಾತ್ರ ಬಾಕಿ ಇದೆ. ಅಗಸ್ತ್ಯ ಕ್ರಿಯೇಷನ್ಸ್ ಲಾಂಛನದಲ್ಲಿ ವೆಂಕಟಾಚಲಯ್ಯ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ರಾಕೇಶ್ ರಾವ್ ಅವರ ಸಹ ನಿರ್ಮಾಣವಿದೆ. ಅಗಸ್ತ್ಯ ಸಂತೋಷ್ ಸಂಗೀತ ನಿರ್ದೇಶನ, ಅಜಿತ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಟೈಟಲ್ನಿಂದಲೇ ಗಮನ ಸೆಳೆಯುತ್ತಿರುವ 'ರಿಚ್ಚಿ'ಯನ್ನು ಮುಂದಿನ ವರ್ಷ ತೆರೆಗೆ ತರಲು ನಿರ್ದೇಶಕ ಹೇಮಂತ್ ಕುಮಾರ್ ಪ್ಲಾನ್ ಮಾಡಿಕೊಂಡಿದ್ದಾರೆ.
'ಕ್ಯಾಪ್ಚರ್'ನಲ್ಲಿ ಮಾನ್ವಿತಾ: ನಟಿ ಮಾನ್ವಿತಾ ಕಾಮತ್ ಅವರು ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಲೋಹಿತ್ ನಿರ್ದೇಶನದ 'ಕ್ಯಾಪ್ಚರ್' ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ನಟಿ ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಅವರ ಮಗಳಾಗಿ ಮಾನ್ವಿತಾ ಕಾಣಿಸಿಕೊಳ್ಳಲಿದ್ದಾರೆ.
'ಕ್ಯಾಪ್ಚರ್' ಇದೊಂದು ಹಾರರ್ ಸಿನಿಮಾ. ಸಂಪೂರ್ಣ ಚಿತ್ರವನ್ನು ಸಿಸಿಟಿವಿ ಕಾನ್ಸೆಪ್ಟ್ನಲ್ಲಿ ಚಿತ್ರೀಕರಣ ಮಾಡಲಾಗಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನವೊಂದು ನಡೆದಿದೆ. ಸಿನಿಮಾದಲ್ಲಿ ಮಾನ್ವಿತಾ ಕೂಡ ನಟಿಸುತ್ತಿದ್ದು, 'ಕ್ಯಾಪ್ಚರ್' ಮೇಲಿನ ಕುತೂಹಲ ಹೆಚ್ಚಿಸಿದೆ. ಚಿತ್ರದಲ್ಲಿ ಸ್ನೇಹಾ ಎಂಬ ಪಾತ್ರದಲ್ಲಿ ನಟಿ ಕಾಣಿಸಿಕೊಳ್ಳಲಿದ್ದು, ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
ಈ ಬಗ್ಗೆ ಮಾತನಾಡಿದ್ದ ಮಾನ್ವಿತಾ ಕಾಮತ್, "ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಟಿಸಿದ್ದೇನೆ. ಪ್ರಾರಂಭದಲ್ಲಿ ತುಂಬಾ ಭಯವಿತ್ತು. ಆದರೆ ಪಾತ್ರ ಚೆನ್ನಾಗಿದೆ ಎನ್ನುವ ಕಾರಣಕ್ಕೆ ಒಪ್ಪಿಕೊಂಡೆ. 15 ದಿನಗಳು ಗೋವಾದಲ್ಲಿ ಶೂಟಿಂಗ್ ಮಾಡಿದ್ದೆವು. ಪ್ರಿಯಾಂಕಾ ಮೇಡಮ್ ಜೊತೆ ಕೆಲಸ ಮಾಡಿದ್ದು ತುಂಬಾ ಇಷ್ಟವಾಯಿತು. ಶೂಟಿಂಗ್ ಮುಗಿಸಿ ಮನೆಗೆ ಬಂದಾಗ ತುಂಬಾ ದೃಷ್ಟಿ ಆಗಿತ್ತು ಅನಿಸುತ್ತೆ. ಜ್ವರ ಕೂಡ ಬಂದಿತ್ತು. ದೃಷ್ಟಿ ತೆಗಿಸಿಕೊಂಡ ಮೇಲೆ ಸರಿ ಆಯಿತು" ಎಂದು ತಿಳಿಸಿದ್ದರು.
ಇದನ್ನೂ ಓದಿ:ಧಾರಾವಾಹಿ ಮೂಲಕ ಕಿರುತೆರೆಗೆ ಬಂದ ಮಾನ್ವಿತಾ ಕಾಮತ್...!