ಮುಂಬೈ(ಮಹಾರಾಷ್ಟ್ರ): ಬಾಲಿವುಡ್ ಮಂದಿಯಿಂದ ತಮ್ಮನ್ನು ಕೊಂಡುಕೊಳ್ಳಲು(ನಿಭಾಯಿಸಲು) ಸಾಧ್ಯವಿಲ್ಲ ಎಂಬ ಹೇಳಿಕೆ ನೀಡಿ, ವಿವಾದಕ್ಕೆ ಕಾರಣವಾಗಿದ್ದ ಪ್ರಿನ್ಸ್ ಮಹೇಶ್ ಬಾಬು ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ತಾವು ಸಿನಿಮಾ ಪ್ರೀತಿಸುವುದಾಗಿ ತಿಳಿಸಿದ್ದು, ಎಲ್ಲ ಭಾಷೆಗಳನ್ನೂ ಗೌರವಿಸುವುದಾಗಿ ಹೇಳಿಕೊಂಡಿದ್ದಾರೆ.
ಇತ್ತೀಚಿಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಮಹೇಶ್ ಬಾಬು ಮಾಧ್ಯಮದವರೊಂದಿಗೆ ಮಾತನಾಡಿದ್ದರು. ಈ ವೇಳೆ, ಬಾಲಿವುಡ್ನಿಂದ ತಮಗೆ ಹೆಚ್ಚಿನ ಆಫರ್ಗಳು ಬರುತ್ತಿದ್ದು, ಆದರೆ, ಆ ಮಂದಿಗೆ ನಾನು ಕೇಳುವಷ್ಟು ಸಂಭಾವನೆ ನೀಡಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ ಎಂದಿದ್ದರು.
ಇದರ ಜೊತೆಗೆ ನನ್ನನ್ನು ಖರೀದಿಸಲು ಸಾಧ್ಯವಾಗದ ಉದ್ಯಮದಲ್ಲಿ ಕೆಲಸ ಮಾಡುತ್ತಾ ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಈ ವಿಷಯ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಜೊತೆಗೆ ವಿವಾದಕ್ಕೂ ಕಾರಣವಾಗಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಮಹೇಶ್ ಬಾಬು, ನಾನು ಸಿನಿಮಾಗಳನ್ನ ಪ್ರೀತಿಸುತ್ತೇನೆ ಮತ್ತು ಎಲ್ಲ ಭಾಷೆಗಳನ್ನ ಗೌರವಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಹೇಳಿಕೆ ವಿಚಾರವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮಹೇಶ್ ಬಾಬು, ತೆಲುಗು ಚಿತ್ರಗಳಲ್ಲಿ ಕೆಲಸ ಮಾಡುತ್ತಿರುವ ನಾನು ಆರಾಮವಾಗಿದ್ದೇನೆ. ತೆಲುಗು ಚಿತ್ರರಂಗದಲ್ಲೇ ತಾವು ಸಂತೋಷವಾಗಿರುವುದಾಗಿ ಹೇಳಿಕೊಂಡಿದ್ದಾರೆ. ನಾನು ಸಿನಿಮಾಗಳನ್ನ ಪ್ರೀತಿಸುತ್ತೇನೆ ಮತ್ತು ಎಲ್ಲ ಭಾಷೆಗಳನ್ನ ಗೌರವಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ಬಾಹುಬಲಿ ಖ್ಯಾತಿಯ ರಾಜಮೌಳಿ ಜೊತೆಗೆ ಮುಂದಿನ ಪ್ಯಾನ್ ಇಂಡಿಯಾ ಚಿತ್ರ ಮಾಡುತ್ತಿರುವುದಾಗಿ ನಟ ಮಹೇಶ್ ಬಾಬು ಹೇಳಿಕೊಂಡಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ನಟ ಮಹೇಶ್ ಬಾಬು ಒಂದು ಚಿತ್ರಕ್ಕೋಸ್ಕರ ಬರೋಬ್ಬರಿ 60 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ.