ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2023ರ ಈ ಸಂದರ್ಭದಲ್ಲಿ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಸಾಮಾಜಿಕ ಮಾಧ್ಯಮದಲ್ಲಿ ಒಂದು ಸುಂದರ ಪೋಸ್ಟ್ ಮಾಡಿದ್ದಾರೆ. ಮಹಿಳೆಯರ ಶಕ್ತಿ ಬಗ್ಗೆ ಮಾತನಾಡುತ್ತಾ, ಮಹೇಶ್ ಬಾಬು ತಮ್ಮ ಪತ್ನಿ ನಮ್ರತಾ ಶಿರೋಡ್ಕರ್ ಮತ್ತು ಪ್ರಪಂಚದ ಪ್ರತೀ ಮಹಿಳೆಯರಿಗೂ ಈ ಪೋಸ್ಟ್ ಅನ್ನು ಅರ್ಪಿಸಿದ್ದಾರೆ. ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ ಪತ್ನಿ, ನಟಿ ನಮ್ರತಾ ಶಿರೋಡ್ಕರ್ ಅವರನ್ನು ತಮ್ಮ ಶಕ್ತಿಯ ಆಧಾರ ಸ್ತಂಭ ಎಂದು ಹೇಳಿಕೊಳ್ಳುತ್ತಾ ಬಂದಿದ್ದಾರೆ. ಹಲವು ಸಂದರ್ಶನಗಳಲ್ಲಿ ನಟ ಮಹೇಶ್ ಬಾಬು ತಮ್ಮ ಪತ್ನಿ ಬಗ್ಗೆ ಮಾತನಾಡಿದ್ದಾರೆ. ತಮ್ಮ ಯಶಸ್ಸಿಗೆ ನಮ್ರತಾ ಅವರೇ ಕಾರಣ ಎಂದು ತಿಳಿಸಿದ್ದಾರೆ.
ಮಹೇಶ್ ಬಾಬು ಇನ್ಸ್ಟಾ ಸ್ಟೋರಿ:2023ರ ಮಹಿಳಾ ದಿನವನ್ನು ಹೃದಯಸ್ಪರ್ಶಿ ಬರಹದೊಂದಿಗೆ ಆಚರಿಸಿದ್ದಾರೆ. ತಮ್ಮ ಜೀವನದಲ್ಲಿ ನಮ್ರತಾ ಅವರ ಉಪಸ್ಥಿತಿ, ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, "ಇಂದು ಮತ್ತು ನಿತ್ಯ ನಿಮ್ಮ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಅಚಲ ನಿರ್ಣಯ ಆಚರಿಸುತ್ತಿದ್ದೇನೆ. ನನ್ನವಳಿಗೆ (ಪತ್ನಿ ನಮ್ರತಾ ಶಿರೋಡ್ಕರ್) ಮತ್ತು ಎಲ್ಲಾ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು" ಎಂದು ಮಹೇಶ್ ಬಾಬು ಬರೆದುಕೊಂಡಿದ್ದಾರೆ.
ಕಳೆದ ತಿಂಗಳು ನಮ್ರತಾ ಶಿರೋಡ್ಕರ್ ಮತ್ತು ಮಹೇಶ್ ಬಾಬು 18ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. ವಿವಾಹದ ನಂತರ ನಮ್ರತಾ ಸಿನಿಮಾ ವೃತ್ತಿಜೀವನದಿಂದ ದೂರವಿದ್ದಾರೆ. ಮಹೇಶ್ ಬಾಬು ತಮ್ಮ ವೃತ್ತಿಜೀವನದ ಮೇಲೆ ಗಮನ ಕೇಂದ್ರೀಕರಿಸಲು ಮನೆಯ ಮತ್ತು ಮಹೇಶ್ ಅವರ ವ್ಯವಹಾರಗಳ ಎಲ್ಲ ಜವಾಬ್ದಾರಿಗಳನ್ನು ನಮ್ರತಾ ತೆಗೆದುಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಹೇಶ್ ಬಾಬು ತಮ್ಮ ಪತ್ನಿಯ ತ್ಯಾಗವನ್ನು ಒಪ್ಪಿಕೊಂಡಿದ್ದಾರೆ.