ಡಾ. ವಿಷ್ಣು ಸೇನಾ ಸಮಿತಿಯು ಸತತ ಹತ್ತು ವರ್ಷಗಳಿಂದ ಹೊರ ತರುತ್ತಿರುವ 'ಕೋಟಿಗೊಬ್ಬ ಕ್ಯಾಲೆಂಡರ್' ಇಂದು ಬೆಂಗಳೂರಿನ ಲಲಿತಕಲಾ ಅಕಾಡೆಮಿಯ ಆವರಣದಲ್ಲಿ ಬಿಡುಗಡೆ ಆಯಿತು.
'ಕೋಟಿಗೊಬ್ಬ ಕ್ಯಾಲೆಂಡರ್': ಪ್ರತಿ ವರ್ಷವೂ ವಿಭಿನ್ನ, ವಿಶೇಷ ಶೈಲಿಯಲ್ಲೇ ಮೂಡಿಬರುತ್ತಿರುವ ಈ ಕ್ಯಾಲೆಂಡರ್ಗೆ ದಶಕದ ಸಂಭ್ರಮವಾಗಿದ್ದರಿಂದ, ಈ ಬಾರಿ ಮತ್ತಷ್ಟು ವಿಭಿನ್ನತೆಯಿಂದ ಕ್ಯಾಲೆಂಡರ್ ಅನ್ನು ರೂಪಿಸಲಾಗಿದೆ. ನಾಡಿನ ಸುಪ್ರಸಿದ್ಧ ಕಲಾವಿದರಾದ ಬಾಗೂರು ಮಾರ್ಕಂಡೇಯ ಮತ್ತು ತಂಡ ಈ ಕ್ಯಾಲೆಂಡರ್ಗೆ ಚಿತ್ರ ಬಿಡಿಸಲೆಂದೇ ಕಲಾ ಶಿಬಿರ ಮಾಡಿ, 12 ಚಿತ್ರಗಳನ್ನು ಬಿಡಿಸಲಾಗಿದ್ದು, ಹನ್ನೆರಡು ಚಿತ್ರಗಳೂ ಒಂದೊಂದು ಕಾನ್ಸೆಪ್ಟ್ ಹೊಂದಿದೆ.
ವೆಚ್ಚಕ್ಕೂ ಕಡಿಮೆ ದರದಲ್ಲಿ ಮಾರಾಟ: ಕ್ಯಾಲೆಂಡರ್ ತಯಾರಿಕೆ ಮತ್ತು ವಿನ್ಯಾಸದ ಕುರಿತು ಮಾತನಾಡಿದ ಡಾ. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, "ಕೋಟಿಗೊಬ್ಬ ಕ್ಯಾಲೆಂಡರ್ ಪ್ರಾರಂಭ ಮಾಡಿದ್ದು 2011ರಲ್ಲಿ. ಆಗ ಸಾವಿರ ಕ್ಯಾಲೆಂಡರ್ ಮುದ್ರಣ ಮಾಡಲಾಗಿತ್ತು. ಮಾರಾಟವಾಗಿದ್ದು ಕೇವಲ 200 ಮಾತ್ರ. ಆದರೆ, ಈಗ ಇಪ್ಪತ್ತೈದು ಸಾವಿರ ಕ್ಯಾಲೆಂಡರ್ ಮುದ್ರಣವಾಗುತ್ತಿವೆ. ಯಜಮಾನರ ಅಭಿಮಾನಕ್ಕಾಗಿ ಮುದ್ರಣಕ್ಕೆ ಖರ್ಚಾದ ಹಣಕ್ಕಿಂತಲೂ ಕಡಿಮೆ ದರದಲ್ಲಿ ಮನೆಮನೆಗೂ ತಲುಪಿಸಲಾಗುತ್ತಿದೆ'' ಎಂದರು.
ಕ್ಯಾಲೆಂಡರ್ ಕಾನ್ಸೆಪ್ಟ್: ಹೊಸವರ್ಷದ ಕ್ಯಾಲೆಂಡರ್ನಲ್ಲಿ ವಿಷ್ಣುವರ್ಧನ್ ಅವರನ್ನು ಹೊಸ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಯುವಕರ ಪ್ರತಿನಿಧಿ, ಮಾತೃಪ್ರೇಮಿ, ಸಿಂಹರೂಪಿ, ಕನ್ನಡಪರ ಹೋರಾಟಗಾರ, ದಾನವೀರ ಶೂರ, ಮಹಿಳಾಪರ, ವೃಕ್ಷಪ್ರೇಮಿ, ಸಂತ, ರೈತ, ಸಂಗೀತ ಪ್ರೇಮಿ, ದೇಶಭಕ್ತ, ವಿಷ್ಣುವರ್ಧನ್ ಹಾಗೂ ಕಟೌಟ್ ಜಾತ್ರೆಯ ಕಾನ್ಸೆಪ್ಟ್ಗಳನ್ನು ಇದು ಹೊಂದಿದೆ. ಮತ್ತೊಂದು ವಿಶೇಷವೆಂದರೆ 'ಸಿಂಬಲ್ ಆಫ್ ವಿಷ್ಣು ಕುಲ' ಎನ್ನುವ ಸ್ಲೋಗನ್ ಚಿತ್ರ ಕೂಡ ಇದೆ.