ಕನ್ನಡ ಚಿತ್ರರಂಗದಲ್ಲಿ ಮೊಟ್ಟಮೊದಲ ಬಾರಿಗೆ ನಂದಿ ಪ್ರಶಸ್ತಿ ಆರಂಭವಾಗಿದೆ. ಡಿಸೆಂಬರ್ ತಿಂಗಳಲ್ಲಿ ಪ್ರಶಸ್ತಿ ಸಮಾರಂಭ ನಡೆಯುತ್ತಿದ್ದು, ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಮೊದಲ ಹಂತವಾಗಿ ನಂದಿ ಚಲನಚಿತ್ರ ಪ್ರಶಸ್ತಿ 2023ಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಾಲನೆ ನೀಡಿ, ಹೊಸ ಪ್ರಶಸ್ತಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಅವರು, "ಸಂಸ್ಥಾಪಕರಿಗೆ ಒಳ್ಳೆದಾಗಲಿ. ನಾನು 2003-2004ರಲ್ಲೇ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಹೋಗುವುದನ್ನೇ ಬಿಟ್ಟಿದ್ದೇನೆ. ಅದಕ್ಕೆ ಬೇರೆ ಕಾರಣವಿದೆ. ಆದರೆ, ಈ ಪ್ರಶಸ್ತಿ ಅರ್ಹ ಕಲಾವಿದರಿಗೆ ಸಿಗಲಿ ಎಂದು ಆಶಿಸುತ್ತೇನೆ. ಅವಾರ್ಡ್ ಮತ್ತು ದುಡ್ಡು ಅಂತ ಬಂದಾಗ ಪ್ರಶಸ್ತಿ ಬಿಟ್ಟು ದುಡ್ಡಿಗೆ ಕೈ ಹಾಕುವವರೂ ಇದ್ದಾರೆ. ಹಾಗಾಗಿ ಪ್ರಶಸ್ತಿಗೆ ಗೌರವ ಕೊಟ್ಟು ಅದಕ್ಕಾಗಿ ಕಷ್ಟ ಪಡುವಂತಹ ಕಲಾವಿದರಿಗೆ ನೀಡಿ. ನಂದಿ ಬಹಳ ಶ್ರೇಷ್ಠ. ಅದರ ಹೆಸರಿನಲ್ಲಿ ನಡೆಸುತ್ತಿರುವ ಈ ಪ್ರಶಸ್ತಿ ಕಾರ್ಯಕ್ರಮ ಅಷ್ಟೇ ಶುದ್ಧವಾಗಿರಲಿ. ಕರ್ನಾಟಕದಲ್ಲಿ ಅವಾರ್ಡ್ಸ್ ಪ್ರೋಗ್ರಾಂ ನಡೆಸಲು ಬಹಳ ಕೊರತೆ ಇದೆ. ತಲೆ ಎತ್ತಿ ನೋಡುವಂತಹ ಪ್ರಶಸ್ತಿ ಕಾರ್ಯಕ್ರಮಗಳು ಇಲ್ಲ. ಅಂತಹದ್ದೊಂದು ವಿಭಿನ್ನ ಕಾರ್ಯಕ್ರಮ ನಂದಿ ಪ್ರಶಸ್ತಿ ಆಗಲಿ" ಎಂದು ಹಾರೈಸಿದರು.
ನೆರೆಯ ಆಂಧ್ರಪ್ರದೇಶದಲ್ಲಿ ಮನರಂಜನಾ ಕ್ಷೇತ್ರದ ಸಾಧಕರಿಗೆ ಕೊಡುವ ರಾಜ್ಯ ಪ್ರಶಸ್ತಿಗೂ ನಂದಿ ಅವಾರ್ಡ್ಸ್ ಎಂದೇ ಹೆಸರಿದೆ. ಆದರೆ, ಆ ಪ್ರಶಸ್ತಿಗೂ ಈ ಪ್ರಶಸ್ತಿಗೂ ಸಂಬಂಧವಿಲ್ಲ. ಆಂಧ್ರಪ್ರದೇಶದಂತೆ ಕನ್ನಡದ ಪ್ರಶಸ್ತಿಗೂ ನಂದಿ ಅವಾರ್ಡ್ ಎಂದೇ ಕರೆಯಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ನಂದಿ ಎನ್ನುವುದು ಕನ್ನಡದ ಪಾಲಿಗೂ ಒಂದು ಪವರ್‌ಫುಲ್ ಇಮೇಜ್ ಎನಿಸುವ ಲಾಂಛನ. ಆ ಕಾರಣದಿಂದಲೇ 'ನಂದಿ' ಎಂಬ ಹೆಸರನ್ನೇ ಕನ್ನಡದ ಪ್ರಶಸ್ತಿಗೂ ಇಡಲಾಗಿದೆ.