ಸ್ಯಾಂಡಲ್ವುಡ್ನಲ್ಲಿ ಸದ್ಯ ಹಾಡುಗಳು ಹಾಗು ಟೀಸರ್ನಿಂದಲೇ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ 'ಫೈಟರ್'. ಕನ್ನಡ ಚಿತ್ರರಂಗದಲ್ಲಿ ಮರಿ ಟೈಗರ್ ಎಂದು ಗುರುತಿಸಿಕೊಂಡಿರುವ ವಿನೋದ್ ಪ್ರಭಾಕರ್ ಅಭಿನಯದ ಫೈಟರ್ ಚಿತ್ರ ಬಹತೇಕ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಕುರಿತು ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸಿದ್ದಾರೆ.
ಸಹಜವಾಗಿ ಚಿತ್ರತಂಡ ಅಥವಾ ಸೆಲೆಬ್ರಿಟಿಗಳ ಕೈಯಲ್ಲಿ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿಸಲಾಗುತ್ತದೆ. ಆದರೆ ಫೈಟರ್ ಚಿತ್ರತಂಡವು ಕನ್ನಡಪರ ಸಂಘಟನೆಗಳ ಹೋರಾಟಗಾರರು, ನಿವೃತ್ತ ನ್ಯಾಯಾಧೀಶರು, ಮಾನವಹಕ್ಕು ಮಹಿಳಾ ಅಧ್ಯಕ್ಷರು ಸೇರಿದಂತೆ ಅನೇಕ ಚಳುವಳಿ ಹೋರಾಟಗಾರರಿಂದ ಫೈಟರ್ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದು ವಿಶೇಷವಾಗಿತ್ತು .
ನೂತನ್ ಉಮೇಶ್ ನಿರ್ದೇಶನದ ಫೈಟರ್ ಚಿತ್ರ ಅಕ್ಟೋಬರ್ 6ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ಕನ್ನಡಪರ ಸಂಘಟನೆಗಳ ಹೋರಾಟಗಾರರು ಅನೌನ್ಸ್ ಮಾಡಿದರು. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಶಿವರಾಮೇಗೌಡ, ಕನ್ನಡ ಸೇನೆ ರಾಜ್ಯಾಧ್ಯಕ್ಷರಾದ ಕೆ.ಆರ್ ಕುಮಾರ್, ರಮೇಶ್ ಗೌಡ (ಕಸ್ತೂರಿ ಕರ್ನಾಟಕ ಜನಪ್ರಿಯ ವೇದಿಕೆ), ಕೆ.ಸಿ ಮೂರ್ತಿ (ಕರ್ನಾಟಕ, ಕನ್ನಡ ರಕ್ಷಣಾ ವೇದಿಕೆ), ವೆಂಕಟ್ ಸ್ವಾಮಿ (ಸಮತಾ ಸೈನಿಕ ದಳ), ಶಿವಾನಂದ ಶೆಟ್ಟಿ(ಕ.ರ.ವೇ ಬೆಂಗಳೂರು), ಭಾರತಿ ನಾಯಕ್ (ಹ್ಯೂಮನ್ ರೈಟ್ಸ್ ಮಹಿಳಾ ಅಧ್ಯಕ್ಷರು), ಕೆ.ಕೆ. ಮೋಹನ್ (ನಾಡ ಸೇನಾನಿ ಕೆಂಪೇಗೌಡ ಟ್ರಸ್ಟ್), ಮಲ್ಲಿಕಾರ್ಜುನ, ವಿಜಯಕುಮಾರ್, ಸೋಮಶೇಖರ್, ರವಿಕುಮಾರ್ ಮುಂತಾದ ಗಣ್ಯರು ಸಮಾರಂಭಕ್ಕೆ ಆಗಮಿಸಿ "ಫೈಟರ್" ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.
ಮೊದಲು ಮಾತನಾಡಿದ ನಟ ವಿನೋದ್ ಪ್ರಭಾಕರ್, ಫೈಟರ್ ಚಿತ್ರದಲ್ಲಿ ನಾನು ರೈತರ ಪರ ಹೋರಾಟಗಾರನ ಪಾತ್ರ ನಿರ್ವಹಿಸಿದ್ದೇನೆ. ಇಂದು ಕನ್ನಡಪರ ಇರುವ ಹಲವು ಸಂಘಟನೆಗಳು ನಮ್ಮ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ್ದು, ಬಹಳ ಸಂತೋಷವಾಗಿದೆ ಎಂದು ತಿಳಿಸಿದರು.